ಸಮರ್ಪಣಾ ಹಾದಿಯಲ್ಲಿ ಪಾದಯಾತ್ರೆ: ದೈವಿಕ ಸರಳತೆಯೆಡೆಗೆ ಪಯಣ

ನನ್ನ ಎರಡನೇ ವರ್ಷದ ಪಾದಯಾತ್ರೆಯನ್ನು ಬೆಂಗಳೂರಿನಿಂದ ಪವಿತ್ರ ತಿರುಪತಿ ಬೆಟ್ಟಗಳ ಕಡೆಗೆ ಶುರುಮಾಡುವಾಗ (ಕಳೆದ ವಾರ), ಸುಮಾರು 260 ಕಿಲೋಮೀಟರ್ ದೂರದ ಆರು ದಿನಗಳ ಈ ಪಯಣ ನನಗೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲಿಯೂ ಸವಾಲು ತರುತ್ತದೆ ಎಂಬ ಸ್ಪಷ್ಟವಾದ ಅರಿವಿತ್ತು. ಇದೇನು ನನ್ನ ಮೊದಲ ಯಾತ್ರೆ ಅಲ್ಲ, ನಾನು ಹಿಂದಿನ ಅನುಭವಗಳನ್ನು ನಿಮ್ಮೊಡನೆ ಹಂಚಿಕೊಂಡಿರುವಂತೆ, ಪ್ರತೀ ವರ್ಷವೂ ಈ ಪಯಣ ಹೊಸ ಹೊಸ ಸವಾಲುಗಳನ್ನು ತಂದೇ ತರುತ್ತದೆ ಹೊಸ ಹೊಸ ಅನುಭವಗಳನ್ನು ಕೊಡುತ್ತದೆ. ಈ ಸವಾಲುಗಳು ಗೊತ್ತಿದ್ದೂ ಸಹ, ಸಾವಿರಾರು ಭಕ್ತರು, ನನನ್ನೂ ಸೇರಿಸಿ, ಈ ಕಷ್ಟಕರ ಯಾತ್ರೆಗೆ ಕೈಹಾಕುತ್ತಾರೆ. ಇದು ಏಕೆ? ಇದರ ಹಿಂದಿನ ಪ್ರೇರೇಪಣೆ ಏನು?

ಇದನ್ನೇ ಯೋಚಿಸುತ್ತಾ ಹೋದಂತೆ, ಇಷ್ಟು ದೂರ ನಡೆಯುವ ಸಾಧನೆಯ ಭಾವನೆಯಾ? ಒಂದೇ ಉದ್ದೇಶದಲ್ಲಿ ಸಮ್ಮಿಳಿತಗೋಂಡ ಒಂದು ಸಮುದಾಯದ ಭಾಗವಾಗಿರುವ ಆಲೋಚನೆಯಾ? ಅಥವಾ ಅದು ಒಳಗಿನ ಶಾಂತಿಯ ಹುಡುಕಾಟವೋ, ನಮ್ಮ ಹೆಜ್ಜೆಗಳ ನಾದದಲ್ಲಿರುವ ಆ ಶಾಂತ ಚಲನೆಯಲ್ಲಿರುವುದೋ? ಅಲ್ಲದೆ, ಅದಕ್ಕಿಂತಲೂ ದೊಡ್ಡ ಉದ್ದೇಶ ಏನಾದರೂ ಇರಬಹುದೋ? ನಮ್ಮ ಶ್ರಮ, ಆಶೆಗಳು, ನಮ್ಮೆಲ್ಲರನ್ನೂ ಪರಮಾತ್ಮನಿಗೆ ಸಮರ್ಪಿಸುವ ಶರಣಾಗತಿಯ ಆ ನಿರಾಳ ಭಾವವೆ?

Paada Yaatre

ನಾನು ನಡೆಯುತ್ತಿರುವಾಗ, ಹಲವು ಯಾತ್ರಿಕರ ಜೊತೆ ಈ ಕುರಿತು ಮಾತು ಶುರು ಮಾಡಿದೆ. ಒಂದೇ ಪ್ರಶ್ನೆ ನನ್ನ ಮನಸ್ಸಿನಲ್ಲಿಯೂ, ನನ್ನ ಮಾತುಗಳಲ್ಲಿಯೂ ಕಾಡುತ್ತಿತ್ತು: ಯಾವುದರಿಂದ ಪ್ರೇರೇಪಿತನಾಗಿ ನೀವು ಈ ಯಾತ್ರೆಯನ್ನು ಕೈಗೊಂಡಿದ್ದೀರಿ? ಆರಂಭದಲ್ಲಿ ಹೆಚ್ಚಿನವರು ದೈಹಿಕ ಲಾಭಗಳ ಬಗ್ಗೆ, ಮತ್ತು ದೇವರು ಅವರ ಹೃದಯದ ಆಸೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯ ಬಗ್ಗೆ ಮಾತನಾಡಿದರು. ಆದರೆ ನಮ್ಮ ಮಾತುಕತೆಗಳು ಆಳವಾದಂತೆ, ನಾನು ತೀವ್ರವಾದ ಪ್ರಶ್ನೆ ಕೇಳತೊಡಗಿದೆ: “ನೀವು ಬಯಸಿದಂತೆಯೇ ದೇವರು ನಿಮ್ಮ ಆಸೆಗಳನ್ನು ಈಡೇರಿಸದಿದ್ದರೂ, ನೀವು ಈ ಯಾತ್ರೆಯನ್ನು ಮುಂದುವರಿಸುತ್ತೀರಾ?” ಒಂದಿಷ್ಟೂ ಆಲೋಚನೆ ಮಾಡದೆ, ಹೆಚ್ಚಿನವರು ಧೃಢವಾದ ದನಿಯಲ್ಲಿ "ಹೌದು" ಎಂದರು. ಆ ಉತ್ತರದಲ್ಲಿ ಗೋಚರಿಸಿದ ದೃಢತೆ ಮತ್ತು ಸ್ಪಷ್ಟತೆಯು ಮತ್ತೊಂದು ಆಳವಾದ ಅರ್ಥವನ್ನು ಬಿಚ್ಚಿಟ್ಟಿತು.

ನಾನು ಅವರ ಭಾವನೆಗಳನ್ನು ಆಳವಾಗಿ ಪರಿಶೀಲಿಸುತ್ತಾ ಮುಂದುವರೆದಂತೆ, ನನಗೆ ಒಂದು ವಿಷಯ ಸ್ಪಷ್ಟವಾಯಿತು: ಈ ಯಾತ್ರೆಯು ಬಹಳ ಮಂದಿಗೆ ಪರಮಾತ್ಮನೆಡೆಗೆ ಶರಣಾಗತಿ, ಸಂಪೂರ್ಣ ಸಮರ್ಪಣಾ ಭಾವವಾಗಿತ್ತು. ಈ ಸಮರ್ಪಣ ಮನೋಭಾವದಿಂದ ಅವರು ದೇವರ ಮಹತ್ತರ ಶಕ್ತಿಯ ಅರಿವನ್ನು ಕಂಡುಕೊಳ್ಳುತ್ತಾರೆ, ಅದು ಜಗತ್ತಿನ ಆಸೆಗಳಿಗಿಂತ ಅಪಾರ ಮಹತ್ವವಾದುದು ಎಂದು ಅನುಭವಕ್ಕೆ ಬರುತ್ತದೆ. ಅವರು ಈ ಶಕ್ತಿಯನ್ನು ಹೊರಗಿನದು ಎಂಬಂತೆ ಭಾವಿಸುವುದಿಲ್ಲ, ಅದು ಅವರ ಬದುಕಿನಲಲೇ ಬೆರೆತಿರುವ ಒಂದು ಸ್ಪಷ್ಟ ದೈವಿಕ ಪ್ರತೀಕದಂತೆ, ಮಾರ್ಗದರ್ಶನ ಮಾಡುವ, ಜೀವನವನ್ನು ಒಳ್ಳೆ ದಿಕ್ಕಿನಲ್ಲಿ ರೂಪಿಸುವ ಸ್ಪಷ್ಟ ಶಕ್ತಿಯಂತೆ ಕಂಡುಕೊಳ್ಳುತ್ತಾರೆ.

ಈ ಶರಣಾಗತಿಯೊಂದಿಗೆ ಮತ್ತೊಂದು ಮಹತ್ವದ ವಾಸ್ತವತೆಯ ಅರಿವು ಬರುತ್ತದೆ: ಹೊರೆಯೇ ಇಲ್ಲದ ಜೀವನವೇ ಸರಳತೆಯ ಜೀವನ. ನಾವು ನಮ್ಮ ದೈವೀಕದಲ್ಲಿ ಮಾತ್ರ ಭರವಸೆ ಮತ್ತು ಶ್ರದ್ಧೆ ಇಟ್ಟುಕೊಂಡು ನಡೆಯುವಾಗ, ಸರಳ ಬದುಕಿನ ಸೌಂದರ್ಯದ ಅರಿವು ನಮಗೆ ಬರುತ್ತದೆ. ಈ ಸರಳತೆ ದೈಹಿಕ, ಮಾನಸಿಕ, ಭಾವನಾತ್ಮಕ ಹಗುರತೆಯ ಅನುಭವ ನೀಡುತ್ತದೆ. ನಾವು ಹೊರೆಯೆನಿಸುವ ವಿಷಯಗಳನ್ನು ಬಿಟ್ಟುಕೊಟ್ಟಾಗ, ನಾವು ನಿತ್ಯ ಮತ್ತು ಅವ್ಯಕ್ತ ಪರಮಾತ್ಮನತ್ತ ಸಮೀಪಿಸುತ್ತೇವೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.

ಹಾಗೆಯೇ, ನಮ್ಮ ಪಾದಯಾತ್ರೆ, ಒಂದು ವಾರದ ಕಾಲ ನಮ್ಮ ದಿನನಿತ್ಯದ ಸಂಪತ್ತು, ಸವಲತ್ತು ಮತ್ತು , ಚಂಚಲ ಮನೋವೃತ್ತಿಗಳನ್ನೂ ಆಸ್ಥೆಗಳನ್ನೂ ಬಿಟ್ಟು ಕೊಡಲು ಸಹಾಯ ಮಾಡುತ್ತದೆ. ನಾವು ಚಲಿಸುತ್ತಾ, ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ನಡೆಯುತ್ತೇವೆ, ಆ ಸರಳ ಜೀವನದ ಹಗುರತನವನ್ನು ಅನುಭವಿಸುತ್ತೇವೆ. ಈ ಹಗುರತನ ನಮ್ಮ ಹೃದಯ ಮತ್ತು ಮನಸ್ಸುಗಳನ್ನು ದಿವ್ಯತೆಯತ್ತ ತೆರೆದಿಡುತ್ತದೆ, ಪರಮಾತ್ಮನತ್ತ ಹತ್ತಿರವಾಗುವಂತೆ ಮಾಡುತ್ತದೆ, ಅದು ಆಳವಾದ ಮತ್ತು ಪರಿವರ್ತನಾತ್ಮಕ ಭಾವದ ಅನುಭವ ನೀಡುತ್ತದೆ.

ನಾವು ಯಾತ್ರೆಯ ನಂತರ ನಮ್ಮ ದಿನನಿತ್ಯದ ಬದುಕಿಗೆ ಮರಳಿದಾಗಲೂ, ಈ ಸರಳ ಬದುಕಿನ ಅಭ್ಯಾಸ ನಮ್ಮೊಳಗೇ ಉಳಿಯುತ್ತದೆ. ನಮ್ಮ ಬಳಿ ಎನಿದೆಯೋ, ಎಷ್ಟಿದೆಯೋ ಅಷ್ಟರಲ್ಲಿಯೇ, ಈಗ ಇರುವುದರಲ್ಲಿಯೇ ಸೌಂದರ್ಯವನ್ನು ಹುಡುಕುವ ಬಯಕೆ ನಮ್ಮೊಳಗೆ ಹುಟ್ಟು ಹಾಕುತ್ತದೆ. ಈ ಸರಳ ಜೀವನವು ನಾವು ಯಾವುದೋ ಒಂದು ಜೀವನ ಘಟ್ಟದಲ್ಲಿ ಆನಂದದ ಅನುಭವ ನೀಡಿದ್ದ ಅವಶ್ಯಕತೆಯೇ ಇಂದು ನಮ್ಮ ಅಸ್ತಿತ್ವದ ವ್ಯಾಕುಲತೆಗೆ ಮತ್ತು ಅಸಮಾಧಾನಕ್ಕೆ ಕಾರಣ ಎಂಬ ಸ್ಪಷ್ಟತೆ ಗೋಚರವಾಗುತ್ತದೆ. ಈ ಸರಳ ಬದುಕಿನ ಅನುಭವದಿಂದ ದಕ್ಕಿದ ಈ ಅರಿವು, ನಾವು ದಿವ್ಯತೆಯ ಸಮೀಪದಲ್ಲಿರುವಂತೆ ಧಾನ್ಯತಾ ಭಾವವನ್ನು ನೀಡುತ್ತದೆ.

ಆದ್ದರಿಂದ, ಈ ಪಯಣ ಬರೀ ದೈಹಿಕವಾದುದಲ್ಲ; ಇದು ಆಧ್ಯಾತ್ಮಿಕಯಾನ. ಪ್ರತಿಯೊಂದು ಹೆಜ್ಜೆಯು ನಮಗಿಂತ ಮಹತ್ತಾದ, ಅಪರಿಚಿತವಾದಂತಹ "ಅವ್ಯಕ್ತತೆಯ" ಕಡೆಗೆ ಹಾಕುವ ಹೆಜ್ಜೆಯಾಗಿದ್ದು, ಭರವಸೆ ಮತ್ತು ನಂಬಿಕೆಯೇ ಅಲ್ಲಿ ಏಕಮಾತ್ರ ಮಾರ್ಗದರ್ಶಕ. ಆ ನಂಬಿಕೆಯಲ್ಲಿ, ಆ ಸಮರ್ಪಣಾ ಭಾವದಲ್ಲಿ, ನಾವು ದೇವರ ಸನ್ನಿಧಿಯಲ್ಲಿರುವ ಅನುಭವವನ್ನಷ್ಟೇ ಅಲ್ಲ, ನಮ್ಮ ಸ್ವಂತ ಅಸ್ತಿತ್ವದ ನಿಜಸ್ವರೂಪವನ್ನೂ ಅನುಭವಿಸುತ್ತೇವೆ - ಆ ಆಳವಾದ, ನಿಶ್ಚಲವಾದ ದೈವೀಕ ಸಂಬಂಧವನ್ನು ಅನುಭವಿಸುತ್ತೇವೆ."

#ಸರಳಜೀವನ #ಆಧ್ಯಾತ್ಮಿಕಯಾನ #ಪಾದಯಾತ್ರೆ #ಅಂತರಂಗಶಾಂತಿ #ದಿವ್ಯತೆಯಶರಣಾಗತಿ #ಚೈತನ್ಯಜೀವನ #ದೈವಸಂಬಂಧ #ಆಧ್ಯಾತ್ಮಿಕವಿಕಾಸ #ಜೀವನಪಾಠ #ತಿರುಪತೀಯಾತ್ರ

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?