ಕಾಲಾಯ ತಸ್ಮೈ ನಮಃ: ಜೀವನದ ತೀವ್ರವಾದ ನೋವಿನ ಹಾದಿಯಲ್ಲಿ ಸಂಚಾರ

ಜೀವನದಲ್ಲಿ ತೀವ್ರವಾದ ನೋವಿನ ಅನುಭವ ಕೆಲವು ಸಲ ಅನಿವಾರ್ಯ. ಪ್ರೀತಿಪಾತ್ರನನ್ನು ಕಳೆದುಕೊಳ್ಳುವ ದುಃಖವಾಗಲಿ, ಅಥವಾ ನಮ್ಮ ನಂಬಿಕೆಗೆ ದ್ರೋಹವಾದಾಗ ಎದುರಾಗುವ ನೋವಾಗಲಿ, ಈ ಕ್ಷಣಗಳು ತುಂಬಾ ಆಘಾತಕಾರಿ. ಈ ಭಾವನಾತ್ಮಕ ನೋವು ತೀವ್ರವಾಗಿರುತ್ತದೆ, ಇದು ನಮ್ಮ ಚಿಂತನೆಗೆ ಹೊಡೆತ ನೀಡುತ್ತದೆ, ಏನು ಮಾಡಬೇಕೆಂಬುದು ತೋಚದೆ ಅತೀವ ಕತ್ತಲೆಯ ಮೋಡ ನಮ್ಮ ಮನಸ್ಸನ್ನು ಆವರಿಸುತ್ತದೆ.

Kaalaaya Tasmai Namaha: Navigating Life’s Deepest Pain

ಇಂತಹ ಸಮಯದಲ್ಲಿ ನಮ್ಮ ಯಾವುದೇ ಧರ್ಮಗ್ರಂಥಗಳಾಗಲಿ, ಯಾವುದೇ ಜ್ಞಾನ, ಯಾವುದೇ ಶಾಸ್ತ್ರ, ಅಥವಾ ಅತ್ಯುತ್ತಮ ಸಲಹೆಗಳೂ ಕೂಡಾ ಆ ಆಳವಾದ ಶೋಕದ ಮೋಡವನ್ನು ಶಮನ ಪಡಿಸಲು ಸಹಾಯಕವಾಗುವುದಿಲ್ಲ. ಸಾಮಾನ್ಯವಾಗಿ ನಮ್ಮನ್ನು ಸಮಾಧಾನಗೊಳಿಸುವ ಸಲಹೆಗಳು, ಮಾರ್ಗದರ್ಶನಗಳು ಕಗ್ಗತ್ತಲಿನ ಮೋಡವನ್ನು ಭೇದಿಸಿ ನಮಗೆ ಸಮಾಧಾನ ಪಡಿಸಲು ಸಾಧ್ಯವಾಗುವುದಿಲ್ಲ, ಅಲ್ಲವೇ? ಮತ್ತು ಹಿಂದೆ ಅರ್ಥಗರ್ಭಿತ ಅನ್ನಿಸುತ್ತಿದ್ದ ಮಾತುಗಳು ಅರ್ಥಹೀನವಾದಂತೆ ಭಾಸವಾಗಬಹುದು. ನೋವು ಮತ್ತು ಹತಾಶ ಭಾವನೆ ಇಷ್ಟು ತೀವ್ರವಾಗಿರುವಾಗ, ನಾವು ಏನು ಮಾಡಬಹುದು?

ಕೆಲವು ಸಲ, ನಾವು ಮಾಡಬಹುದಾದ ಉತ್ತಮ ಕಾರ್ಯವೇನೆಂದರೆ, ಅಂತಹ ಭಾವನೆಗಳಿಗೆ ವಿರೋಧ ವ್ಯಕ್ತಪಡಿಸುವುದನ್ನು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸುವುದು. ದುಃಖ, ಕೋಪ, ವಿಷಾದ—ಈ ಎಲ್ಲ ಭಾವನೆಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಅದು ತುಂಬಾ ನೋವಿನ ಅನುಭವ ಕೊಡುತ್ತಿದ್ದರೂ ಸಹ. ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಬದಲು, ಸಾಧ್ಯವಾದರೆ ಸಣ್ಣದಾದ ಸ್ವಯಂ-ಕಾಳಜಿ (self-care) ವಹಿಸುವ ಕ್ರಿಯೆಗಳು ಮತ್ತು ದೃಢವಾದ ಸಣ್ಣ ಸಣ್ಣ ನಿಯಮಗಳನ್ನು ಅನುಸರಿಸುವ ಕಡೆ ಗಮನ ಕೊಡುವುದು. ನಿಮ್ಮ ಜೀವನದ ಸರಳ ಮತ್ತು ಆಗಿನ ವಾಸ್ತವ ಮತ್ತು ಸ್ಪಷ್ಟವಾದ ಅಂಶಗಳ ಮೇಲೆ ಗಮನಕೊಡುವುದು — ಕೆಲವು ಸಲ ಸಣ್ಣ ನಡಿಗೆಯಿಂದ ಪ್ರಾರಂಭಿಸುವುದು, ಒಂದು ಲೋಟ ನೀರನ್ನು ಕುಡಿಯುವುದು, ಅಥವಾ ಆಳವಾಗಿ ಉಸಿರಾಡುವುದು. ಈ ಕ್ರಿಯೆಗಳು ನೋವನ್ನು ತಗ್ಗಿಸದೇ ಇರಬಹುದು, ಆದರೆ ಅದು ಆಗಿನ ಕ್ಷಣದಲ್ಲಿ ನಿಮ್ಮ ಸ್ಥಿರತೆಗೆ ಸಣ್ಣ ಆಧಾರವಾಗುವುದರಲ್ಲಿ ನೆರವಾಗುತ್ತದೆ, ಅತೀವ ಗೊಂದಲದ ನಡುವೆ ನಿಮ್ಮನ್ನು ಸ್ಥಿರತೆಯ ಕಡೆಗೆ ಕೊಂಡೊಯ್ಯುತ್ತದೆ.

ಮತ್ತೆ ನೆನಪಿಡಿ, ಇದನ್ನು ನೀವು ಒಬ್ಬಂಟಿಯಾಗಿಯೇ ಎದುರಿಸಬೇಕೆಂಬ ನಿಯಮವಾಗಲಿ ಅಥವಾ ಅನಿವಾರ್ಯತೆಯಾಗಲಿ ಇಲ್ಲ. ನಿಮ್ಮ ನೋವನ್ನು ಆಲಿಸಲು, ಸಲಹೆ ನೀಡದೆ, ಪರಿಹಾರಗಳಿಗಾಗಿ ಪ್ರಯತ್ನಿಸದೇ ಇರುವ ವ್ಯಕ್ತಿಗಳು, ನಿಮ್ಮನ್ನು ನೋವನ್ನು ಆಲಿಸಲು ಯಾರಾದರೂ ಇದ್ದರೆ ಅವರ ಜೊತೆ ಮುಕ್ತವಾಗಿ ಮಾತಾಡಿ, ಅದು ಚಿಕ್ಕದಾದರೂ ಸಹ ಸಮಾಧಾನವನ್ನು ನೀಡಬಹುದು. ಸುಮ್ಮನೆ ಕೇಳಿಸಿಕೊಳ್ಳುವುದೂ ಕೂಡ ನೋವನ್ನು ಹಂಚಿಕೊಳ್ಳುವಂತಹ ಅನುಭವವಾಗಬಹುದು. ಅತೀವವಾದ ನಿಮ್ಮ ಮನಸ್ಸಿನ ಭಾರವನ್ನು ಕಡಿಮೆ ಮಾಡವಬಹುದು.

ನೀವು ಸಹ ಯಾರಾದರೂ ಇಂತಹ ನೋವಿನ ಮಧ್ಯೆ ಇರುವ ವ್ಯಕ್ತಿಯನ್ನು ಕಂಡರೆ, ಮೌನವಾಗಿ ಆಲಿಸುವವರಾಗಿ, ನಿಮ್ಮ ಪಾತ್ರ ಅಮೂಲ್ಯ. ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಯಾವುದೇ ಒತ್ತಡವಿಲ್ಲದೆ, ನಿಮ್ಮ ಹೃದಯದಿಂದ ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳಿ. ಅವರ ದುಃಖದ ದಾರಿ ದೀರ್ಘವಾದದ್ದು, ಆದರೆ ನಿಮ್ಮ ತಾಳ್ಮೆಯು ಅವರ ನೋವಿನ ಪಯಣವನ್ನು ಸುಲಭಗೊಳಿಸಬಹುದು.

ಕಾಲಾನಂತರ, ಅದ್ಭುತವಾದ ಪರಿವರ್ತನೆ ಏನಾದರೂ ಆಗುತ್ತದೆ. ಆ ನೋವಿನ ತೀವ್ರತೆ ಕಡಿಮೆಯಾಗುತ್ತದೆ. ಆ ನೋವಿನ ನೆನಪು ಕಡಿಮೆಯಾಗದಿದ್ದರೂ, ಹಾಗೂ ನೋವಿನ ಭಾವನಾತ್ಮಕ ಪ್ರಭಾವವೇನೂ ಸಂಪೂರ್ಣ ಮಾಸಿಹೋಗದಿದ್ದರೂ, ಅದರ ತೀವ್ರತೆ ಖಂಡಿತವಾಗಿ ಕಡಿಮೆಯಾಗುತ್ತದೆ. ನಿಯಮಿತವಾದ ಚಿಂತನೆ ಮತ್ತು ಆಳವಾದ ಮನನದ ಮೂಲಕ, ಈ ಕ್ಷಣಗಳು ಕೇವಲ ನೋವನ್ನು ಕಡಿಮೆ ಮಾಡುವುದೊಂದೇ ಅಲ್ಲ, ಅದು ಜೀವನದ ಮಹತ್ವ ಪೂರ್ಣ ಪಾಠಗಳಾಗಿ ರೂಪಾಂತರಗೊಳ್ಳುತ್ತದೆ. ಈ ಹೊಸ ನೋಟಗಳು ಇನ್ನು ಮುಂದೆ ನಿಮ್ಮ ಜೀವನದ ಭಾಗವಾಗುತ್ತವೆ, ಮುಂದೆ ನೀವು ಯಾರಾಗಿ ಪರಿವರ್ತನೆಯಾಗುತ್ತೀರಿ ಎಂಬುದು ನಿರ್ಧರಿತವಾಗುತ್ತದೆ, ತಿಳುವಳಿಕೆ ನಿಧಾನವಾಗಿ ದುಃಖದ ಜಾಗವನ್ನು ಆವರಿಸುತ್ತದೆ.

ಈ ಪರಿವರ್ತನೆಯ ಕಾಲವೇ, ತೀವ್ರವಾದ ನೋವು ಶಮನವಾಗಿಸಿ, ಅರ್ಥಗರ್ಭಿತವಾದ ನಮ್ಮ ಅಂತರಾತ್ಮಕ್ಕೆ ಬೇಕಾದ ಪಾಠವನ್ನು ನಮಲ್ಲಿ ತಿಳಿಸಿಕೊಡುವ, "ಕಾಲಾಯ ತಸ್ಮೈ ನಮಃ" ಎಂಬ ಸಂಸ್ಕೃತ ವಾಕ್ಯದ ಮೂಲಕ ಸುಂದರವಾಗಿ ಪ್ರತಿಬಿಂಬಿತವಾಗುತ್ತದೆ. ಇದು ಕಾಲದ ಅಗಾಧ ಮಹತ್ವವನ್ನು ಸ್ವೀಕಾರ ಮಾಡುವಂತೆ, ಅದು ಭಾವನ್ನಾತ್ಮಕ ನೋವನ್ನು ಶಮನ ಮಾಡಿ ನಮ್ಮನ್ನು ಸೌಮ್ಯವಾಗಿ ಮುನ್ನಡೆಸುತ್ತದೆ. ಕಾಲವು ನಮ್ಮ ಭೂತಕಾಲವನ್ನು ಅಳಿಸಿಬಿಡುವುದಿಲ್ಲ; ಬದಲಾಗಿ, ನಮ್ಮ ಅನುಭವಗಳನ್ನು ನಮ್ಮೊಳಗೆ ಸಮ್ಮಿಲಿತವಾಗಿ ನಮ್ಮ ಅಂತರಂಗದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದು ನಾವು ಹೆಚ್ಚು ಹೆಚ್ಚು ತಿಳಿವಳಿಕೆಯಿಂದ ಮತ್ತು ಕಡಿಮೆ ನೋವಿನಿಂದ ಜೀವನದಲ್ಲಿ ಮುನ್ನಡೆಯಲು ಅನುಕೂಲ ಮಾಡಿಕೊಡುತ್ತದೆ.

ವೈಯಕ್ತಿಕವಾಗಿ, ನನ್ನ ಜೀವನದ ನೋವಿನ ಕ್ಷಣಗಳನ್ನು ನಾನು ಯೋಚಿಸಿದಾಗ, ನನಗೆ ಈಗ ಅವುಗಳು ಹೆಚ್ಚಾಗಿ ಆಘಾತಕರವಾಗಿ ಕಾಣಿಸದು. ಬದಲಾಗಿ, ಅವುಗಳು ನನ್ನ ಜೀವನದ ಕಥೆಗಳ ಅಧ್ಯಾಯಗಳಾಗಿವೆ—ಒಮ್ಮೆ ಓದಲು ಕಷ್ಟವಾಗಿದ್ದರೂ, ಈಗ ಅರ್ಥಮಾಡಿಕೊಳ್ಳಲು ಸುಲಭವಾಗಿದೆ. ಆ ನೋವು ದೊಡ್ಡದಾದ ಕಥೆಯ ಒಂದು ಭಾಗವಾಗಿರುವಂತೆ ಅನಿಸುತ್ತಿದೆ, ನಾನು ಅಂತಹ ಅನುಭವಗಳಿಂದ ಕಲಿತಿದ್ದೇನೆ, ಅಂತರಂಗದಲ್ಲಿ ಬೆಳೆಯುತ್ತಿದ್ದೇನೆ , ಮತ್ತು ಕೊನೆಯದಾಗಿ, ಕಾಲದ ಈ ಜ್ಞಾನಕ್ಕೆ ಶರಣಾಗಿದ್ದೇನೆ.

ಕಾಲ, ಮಹಾನ್ ಉಪಶಮನ ಮಾಡುವ ತತ್ವಕ್ಕೆ, ನಾನು ನನ್ನ ವಿನಮ್ರವಾದ ವಂದನೆಯನ್ನು ಅರ್ಪಿಸುತ್ತೇನೆ: "ಕಾಲಾಯ ತಸ್ಮೈ ನಮಃ."

Image by freepik

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?