ದೇವರಿದ್ದಾನೆ ಎನ್ನುವುದಾದರೆ, ಏಕೆ ಕೆಲವು ಜನರ ಜೀವನವನ್ನು ಅವರು ಸಮರ್ಥಿಸಿಕೊಳ್ಳಲಾಗದಷ್ಟು ಕಷ್ಟಗಳಲ್ಲಿ ಕಳೆಯುವಂತೆ ಮಾಡುತ್ತಾನೆ?
ಇತ್ತೀಚೆಗೆ ನನ್ನ ಸ್ನೇಹಿತನ ಜೊತೆ ಫೋನಿನಲ್ಲಿ ಚರ್ಚೆ ಮಾಡುತ್ತಿದ್ದಾಗ ನಿರಾಶೆಯಿಂದ ಕೇಳಿದ ಒಂದು ಪ್ರಶ್ನೆ ನನ್ನನ್ನು ಆಳವಾಗಿ ಯೋಚನೆ ಮಾಡುವಂತೆ ಮಾಡಿತು:
"ದೇವರಿದ್ದಾನೆ ಎನ್ನುವುದಾದರೆ, ಏಕೆ ಕೆಲವು ಜನರ ಜೀವನವನ್ನು ಅವರು ಸಮರ್ಥಿಸಿಕೊಳ್ಳಲಾಗದಷ್ಟು ಕಷ್ಟಗಳಲ್ಲಿ ಕಳೆಯುವಂತೆ ಮಾಡುತ್ತಾನೆ? ಮತ್ತೆ ಕೆಲವು ಜನ, ಸಮಾಜಕ್ಕೆ ಒಳ್ಳೆಯದಾಗದ ಕೆಲಸ ಮಾಡ್ತಿದ್ರೂ, ಸುಖಸಂಪತ್ತಿನಲ್ಲಿ ಜೀವನ ನಡೆಸ್ತಾರೆ?"
ಅವನು ಕೇಳಿದ ಆ ಪ್ರಶ್ನೆ ಸರಿಯಾದ ವಿಚಾರವೇ. ನಾವು ನಮ್ಮ ಸುತ್ತ ನೋಡಿದಾಗ, ಕೆಲವರು ಯಾವಾಗಲೂ ಕಷ್ಟ ಅನುಭವಿಸುತ್ತಿರುತ್ತಾರೆ, ಮತ್ತೆ ಕೆಲವರು ಅತಿಯಾದ ಸುಖದಲ್ಲಿ ಜೀವನ ನಡೆಸುತ್ತಿರುತ್ತಾರೆ. ಈ ಪ್ರಶ್ನೆ ನನ್ನ ಮನದಲ್ಲಿ, ಆಲೋಚನೆ ಮಾಡುವಂತೆ ಪ್ರೇರೇಪಿಸಿತು.
ಸಂಜೆ ಮನೆಯಲ್ಲಿ ನೋಡಿದ ಒಂದು ದೃಶ್ಯ ನನ್ನ ಈ ಯೋಚನೆಗೆ ದಾರಿ ತೋರಿಸಿತು. ಟೇಬಲ್ ಮೇಲೆ ಇಟ್ಟಿದ್ದ ಔಷಧದ ಬಾಟಲಿನ ಕಡೆ ದೃಷ್ಟಿ ಹೋಯಿತು. ಅದು ಬಲು ಕಹಿ ಔಷಧ. ಈಗೇನೋ ಸರಿ, ಆದರೆ ಮಕ್ಕಳಾಗಿದ್ದಾಗ ಈ ತರಹದ ಕಹಿ ಔಷಧ ಕುಡಿಯುವುದು ಎಷ್ಟೋ ಕಷ್ಟವಾಗುತ್ತಿತ್ತು. ಎಷ್ಟೇ ಕಹಿಯಾಗಿರಲಿ, ತಾಯಿಯು ತಮ್ಮ ಮಕ್ಕಳಿಗೆ ಅದನ್ನು ಕುಡಿಸುತ್ತಾಳೆ, ಏಕೆಂದರೆ ಅವಳಿಗೆ ತನ್ನ ಮಕ್ಕಳ ಆರೋಗ್ಯವೇ ಪ್ರಧಾನವಾಗಿರುತ್ತದೆ. ಅವಳು ಮಕ್ಕಳ ವಿರೋಧದ ನಡುವೆಯೂ, ಅವರ ಭವಿಷ್ಯದ ಉತ್ತಮ ಆರೋಗ್ಯಕ್ಕಾಗಿ, ಆ ಔಷಧವನ್ನು ಕುಡಿಸುತ್ತಾಳೆ. ನೀವು ಎಂದಾದರೂ, ಯಾವುದೇ ತಾಯಿ ಕಹಿಯೆಂದು ಮಕ್ಕಳಿಗೆ ಔಷಧಿ ತಪ್ಪಿಸುವುದನ್ನು ನೋಡಿದ್ದೀರಾ? ಇಲ್ಲ ಅಲ್ಲವೇ. ಏಕೆಂದರೆ ಅದರಿಂದ ಮಗುವಿನ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದು ಆಕೆಗೆ ಗೊತ್ತು.
ಇದು ನನಗೆ ಚಿಂತನೆಗೆ ಎಡೆ ಮಾಡಿಕೊಟ್ಟಿತ್ತು, ಇದೆ ಚಿಂತನೆಯಲ್ಲಿ, ನನಗೆ ಮನಸ್ಸಿಗೆ ಅನಿಸಿದ್ದು ಏನೆಂದರೆ, ದೇವರು ಕೂಡ ನಮ್ಮ ಬದುಕಿನ ಕಷ್ಟಗಳನ್ನು ನೀಡುವಲ್ಲಿ ಇದೇ ರೀತಿ ಮನಸ್ಥಿತಿಯಿಂದ ವರ್ತಿಸುತ್ತಿದ್ದಾನೆಯೇ?
ಹಾಗೆ ನೋಡಿದರೆ, ತಾಯಿಯ ಪ್ರೀತಿ ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಹೇಗೋ, ದೇವರೂ ಕೂಡಾ ನಮ್ಮ ಆತ್ಮದ ಬೆಳವಣಿಗೆಗಾಗಿ ನಮ್ಮನ್ನು ಕಠಿಣ ಸಂದರ್ಭಗಳಲ್ಲಿ ಇದೆ ರೀತಿಯ ಮಾತೃ ಪ್ರೀತಿ ಹೊಂದಿದ್ದಾನೆಯೆಂದು ಅನ್ನಿಸುವುದಿಲ್ಲವೇ? ನಾವು ಎದುರಿಸುತ್ತಿರುವ ಸಮಸ್ಯೆಗಳು ಬಾಳಿನಲ್ಲಿ ಬುದ್ಧಿಶಕ್ತಿ ಮತ್ತು ಅಂತಃಶಕ್ತಿ ಹೆಚ್ಚಿಸವುದು, ಕಷ್ಟಗಳು ನಮ್ಮನ್ನು ಸಬಲಗೊಳಿಸುವುದು, ನಮ್ಮ ಅರಿವಿಗೆ ಬಾರದ ಯಾವುದೋ ದೊಡ್ಡ ಉದ್ದೇಶಕ್ಕಾಗಿ ನಮ್ಮನ್ನು ಅಣಿವುಗೊಳಿಸುತ್ತಿರಬಹುದು ಎಂದು ಅನಿಸುವುದಿಲ್ಲವೇ?

ನಾವು ಸಂಕಷ್ಟದಲ್ಲಿ ಇದ್ದಾಗ, ಯಾಕೆ ನನಗೆ ಹೀಗೆ ನಡೆಯುತ್ತಿದೆ ಎಂದು ಪ್ರಶ್ನಿಸುವುದು, ಅಥವಾ ಕೋಪ ಬರುವುದು ಸಹಜ. ಆದರೆ ಆಗಿನ ಹೋರಾಟ, ನಮಗೆ ಒಳಗಣ ಬೆಳವಣಿಗೆಗೆ ಕಾರಣವಾಗಬಹುದು. ತಾಯಿಯ ಪ್ರೀತಿ ನಮ್ಮ ಈ ಜಗತ್ತಿನಲ್ಲಿ ಮಕ್ಕಳ ಆರೋಗ್ಯವನ್ನು ಪ್ರಧಾನವಾಗಿ ನೋಡುವಂತೆ, ದೇವರ ಪ್ರೀತಿ ನಮ್ಮ ಅಂತರಾತ್ಮದ ಯೋಗಕ್ಷೇಮವನ್ನು ಪ್ರಧಾನವಾಗಿ ನೋಡುತ್ತದೆ.
ನಾವು ನಮ್ಮ ಸಂಕಷ್ಟದ ನಡುವೆ ಹೋರಾಡುತ್ತಿದ್ದಾಗ, ನಾವು ಶಿಕ್ಷೆ ಅನುಭವಿಸುತ್ತಿರುವಂತೆ ಅನಿಸಬಹುದು. ಆದರೆ ಅದು ಖಂಡಿತವಾಗಿಯೂ ಶಿಕ್ಷೆಯೇ? ಅದು ದೈವೀಕ ವಾಸ್ತವತೆಯ ದೊಡ್ಡ ಆಶಯವಾಗಿರಬಹುದಲ್ಲವೇ? ಇದು ನಮ್ಮನ್ನು ಸಬಲರಾಗಿಯೂ, ಜ್ಞಾನಿಯಾಗಿಯೂ ರೂಪಿಸುವಲ್ಲಿ ನಮಗೆ ಸಹಾಯ ಮಾಡುತ್ತಿರಬಹುದಲ್ಲವೇ? ಕಹಿಯಾದ ಔಷಧದಲ್ಲಿ ಧೃಡವಾದ ತಾಯಿಯ ಪ್ರೇಮ ಅಡಗಿರುವಂತೆ, ದೇವರು ನಮ್ಮ ಜೀವನದ ಸಂಕಷ್ಟದ ನಡುವೆ ನಮ್ಮ ಅರಿವಿಗೆ ನಿಲುಕದ ಯಾವುದೋ ಶ್ರೇಷ್ಠ ಉದ್ದೇಶದ ತಯಾರಿಗಾಗಿ ನಮ್ಮನ್ನು ಅನುವುಗೊಳಿಸುತ್ತಿರುವಂತೆ ತೋರುತ್ತದೆ.
ಇನ್ನು, ಕೆಲವರು ಲೋಕ ಕಂಟಕ ಆಶಯದಿಂದ ಕೂಡಿದರೂ ಸುಖ ಜೀವನ ನಡೆಸುತ್ತಿರುವಂತೆ ತೋರುವುದಾದರೂ, ನಮ್ಮ ಕಣ್ಣಿಗೆ ಕಾಣುವಷ್ಟು ಅದೃಷ್ಟವಂತರಾಗಿರಬೇಕೆಂದೇನಿಲ್ಲ ಪ್ರತಿಯೊಬ್ಬರ ಹಾದಿ ಬೇರೆ ಬೇರೆ ಹಾಗೂ ವಿಭಿನ್ನ. ಸುಖವು ಯಾವಾಗಲೂ ಬೆಳವಣಿಗೆಯತ್ತ ಕೊಂಡೊಯ್ಯದಿರಬಹುದು. ಕಹಿ ಎಂದು ಔಷಧ ತಪ್ಪಿಸಿದರೆ, ಆರೋಗ್ಯ ಹೇಗೆ ಸರಿಯಾಗುವುದಿಲ್ಲವೋ, ಹಾಗೆಯೇ ಸುಖವು ನಮ್ಮ ಒಳಗಣ ಬೆಳವಣಿಗೆಗೆ ಏನನ್ನೂ ಕೊಡುಗೆ ನೀಡುವುದಿಲ್ಲ ಎಂಬುದು ನನ್ನ ಭಾವನೆ.
ನಾವು ಎದುರಿಸುವ ಪಾಠಗಳು, ಕಡು ಕಹಿಯಾದ ಔಷಧದಂತೆ ಅನುಭವಕ್ಕೆ ಬಂದರೂ, ಬಾಳಿನಲ್ಲಿ ನಮ್ಮ ಅಂತರಾತ್ಮದ ಬೆಳವಣಿಗೆಗೆ ಔಷಧವಾಗಿರಬಹುದು. ಅದು ಕಷ್ಟದಂತೆ ಕಾಣಬಹುದು, ಆದರೆ ಅದು ನಮ್ಮ ಮುಂದಿನ ಜೀವನಕ್ಕೆ ಒಳ್ಳೆಯದನ್ನು ರೂಪಿಸುತ್ತಿದೆ.
ನಾನೂ ಇನ್ನೂ ಈ ವಿಚಾರದ ಚಿಂತನೆಯಲ್ಲಿ ತೊಡಗಿದ್ದೇನೆ. ನೀವು? ನಿಮ್ಮ ಜೀವನದ ಸಂಕಷ್ಟಗಳು ಮತ್ತು ಹೋರಾಟಗಳು ಯಾವ ರೀತಿಯಲ್ಲಿ ನಿಮ್ಮ ಅಂತರಾತ್ಮದ ಬೆಳವಣಿಗೆಗೆ ಸಹಾಯ ಮಾಡಿದೆ? ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ, ಕೇಳಲು ಕಾತುರನಾಗಿದ್ದೇನೆ.
#ಜೀವನಪಾಠಗಳು #ಆತ್ಮಬಲ #ವಿಶ್ವಾಸ
***Image by freepik