ಹಿರಿಯರ ಆರೈಕೆ: ಪ್ರೀತಿ ಮತ್ತು ಸ್ವಾತಂತ್ರ್ಯದ ನಡುವಿನ ಸಂಘರ್ಷ

ಹಿರಿಯರ ಕಾಳಜಿಯ ಬಗ್ಗೆ ನಾನು ಎಷ್ಟೋ ವರ್ಷಗಳಿಂದ ಒಂದು ನಂಬಿಕೆಯಲ್ಲಿ ಬದುಕುತ್ತಿದ್ದೆ. ಅವರ ಜೀವನವನ್ನು ಸುಲಭಗೊಳಿಸಿ, ಅವರಿಗೆ ಸಂತೋಷ ಕೊಡುವುದು ನನ್ನ ಜವಾಬ್ದಾರಿ ಅಂತ ತಿಳಿದ್ದಿದ್ದೆ. ಅವರಿಗೆ ಸಹಾಯವಾಗುವಂತಹ ಏನಾದರೂ ಕೆಲಸ ಮಾಡುವುದು, ನೆರವು ನೀಡುವುದು, ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಮುಖ್ಯ ಅಂದುಕೊಂಡಿದ್ದೆ. ಆದರೆ ಇದರಲ್ಲಿ ಭಾವನಾತ್ಮಕ ಸಂಕೀರ್ಣತೆ ಇದೆ ಎಂದು ಕ್ರಮೇಣ ತಿಳಿಯಿತು.

ನನಗೆ ಇದು ನನ್ನ ತಾಯಿಯ ಜೊತೆಗಿನ ಒಡನಾಟದ ಅನುಭವದೊಂದಿಗೆ ಇದರ ಭಾವನಾತ್ಮಕ ಸಂಕೀರ್ಣತೆ ಅರಿವಿಗೆ ಬಂತು. ಹಲವಾರು ಸಲ ಆಕೆಗೆ ಏನಾದರೂ ನೆರವು ಮಾಡಲು ಮುಂದಾದಾಗ, ಉದಾಹರಣೆಗೆ ಆಕೆಗೆ ಕೆಲವು ಸಲ ತನ್ನ ಕೆಲಸಗಳಿಂದ ವಿಶ್ರಾಮ ನೀಡಿ ಆಹಾರವನ್ನು ತಯಾರಿಸಲು ಮುಂದಾಗಿ ಅಥವಾ ಮನೆ ಕೆಲಸಗಳಲ್ಲಿ ನೆರವು ನೀಡಿ, ಆಕೆಗೆ ಹಗುರ ಮಾಡಲು ಪ್ರಯತ್ನಿಸಿದ್ದೆ. ಆದರೆ, ಪ್ರತೀ ಬಾರಿಗೆ ಆಕೆಯ ಪ್ರತಿಕ್ರಿಯೆ ಗಮನಿಸಿ ಅಚ್ಚರಿಯಾಗುತ್ತಿತ್ತು. ಸಂತೋಷ ಪಡುವ ಬದಲು, ಆಕೆ ಅಸಹನೆ ತೋರಿಸುತ್ತಿದ್ದಳು. ಇದಕ್ಕೆ ಕಾರಣ, ನಾನು ಆಕೆಗೆ ಸಹಾಯ ಮಾಡುತ್ತಿರುವಾಗ, ನನ್ನ ಅನುಭವಕ್ಕೆ ಬಂದಂತೆ ಆಕೆಗೆ ತನ್ನ ಸ್ವತಂತ್ರ್ಯ ಕಡಿಮೆಯಾಗುತ್ತಿರುವ ಭಾವನೆ ಬರುತ್ತಿರಬಹದು.

ನನಗೆ ಕ್ರಮೇಣ ಸ್ಪಷ್ಟವಾಗಿ ಕಂಡುಕೊಂಡಿದ್ದು ಏನೆಂದರೆ, ಆಕೆಗೆ ತನ್ನ ಜೀವನವನ್ನು ತಾನು ನಡೆಸಿಕೊಳ್ಳಬೇಕೆಂಬ ಇಚ್ಛೆ ಇದೆ, ಆಕೆಯ ಸ್ವತಂತ್ರತೆ ಮತ್ತು ಶಕ್ತಿಯ ಮೇಲೆ ಪೂರ್ಣ ನಂಬಿಕೆ ಇದೆ. ಆಕೆಗೆ ನನ್ನ ಸಹಾಯ ಅಗತ್ಯವೆಂದು ನನಗೆ ತೋರಿದರೂ, ಆಕೆಗೆ ತನ್ನ ಜೀವನವನ್ನು ಸ್ವತಂತ್ರವಾಗಿ ನಡೆಸುವುದು, ಆಕೆಯೇ ತೀರ್ಮಾನ ಮಾಡುವುದು ಪ್ರಧಾನ ಅನ್ನಿಸುತ್ತಿತ್ತು.

ಹಿರಿಯರ ಭಾವನಾತ್ಮಕ ಸಂಕೀರ್ಣತೆ

ನಾನು ಈ ಪಾಠವನ್ನು ಹತ್ತಿರದಿಂದ ಕಂಡುಕೊಳ್ಳುತ್ತಿದ್ದಂತೆ, ನಾನು ನಂಬಿದ್ದ ಈ ಹಿಂದಿನ ಸಿದ್ಧಾಂತವನ್ನು (ಏನಾದರೂ ಸಹಾಯ ಮಾಡುವುದೇ ಅವರ ಸಂತೋಷದ ಮಾರ್ಗವೆಂದು) ನಾನು ನನ್ನೊಳಗೆ ಅಳಿಸಬೇಕಾಗಿತ್ತು. ಕಾಲ ಕಳೆದಂತೆ, ಒಂದು ಮಿತಿಯು ಮೀರಿದ ನಂತರ, ನನ್ನ ಸಹಾಯ ಅವರ ಸ್ವತಂತ್ರತೆ ಮತ್ತು ಘನತೆ ಬಗ್ಗೆ ಇರುವ ಅವರ ಭಾವನೆಯನ್ನು ಹರಣ ಮಾಡುತ್ತಿದೆ ಎಂಬುದು ನನ್ನ ಅರಿವಿಗೆ ಬಂತು.

ದೈಹಿಕ ಸಹಾಯವೇ ಪ್ರಧಾನವಾಗಿರುವುದಿಲ್ಲ ವಯಸ್ಸಾದಂತೆ, ಭಾವನೆಗಳು ಮತ್ತು ಭಾವನೆಗೆ ಸಂಬಂಧಿಸಿದ ಅಗತ್ಯತೆಗಳು ಹೆಚ್ಚಾಗುತ್ತವೆ ಹಾಗೂ ಮತ್ತೂ ಸಂಕೀರ್ಣವಾಗುತ್ತಾ ಹೋಗುತ್ತದೆ.

ವೃದ್ಧರಿಗೆ ನಮ್ಮೆಲ್ಲಾ ಸಹಾಯದ ಅಗತ್ಯವಿರುವಿದಿಲ್ಲ; ಅವರಿಗೆ ತಮ್ಮ ಗೌರವ, ಘನತೆ ಮತ್ತು ತಮ್ಮ ಜೀವನದ ಮೇಲಿನ ಎಂದಿನ ನಿಯಂತ್ರಣವನ್ನು ಹಾಗೂ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಭಾವನಾತ್ಮಕ ಅಗತ್ಯವಿರುತ್ತದೆ. ನಾವು ಅವರಿಗೆ ನೆರವು ಮಾಡುವಾಗ, ನಾವು ಅವರ ಸಾಮರ್ಥ್ಯ, ಶಕ್ತಿ ಮತ್ತು ಭಾವನಾತ್ಮಕ ಗಡಿಯನ್ನು ಅಕ್ರಮವಾಗಿ ದಾಟಬಾರದು .

ನಮ್ಮ ನೆರವಿನ ಹಸ್ತ ಅವರಿಗೆ ತೊಡಕಾಗುವುದೋ?

ಇದು ಮತ್ತೊಮ್ಮೆ ನನ್ನ ಅರಿವಿಗೆ ಬಂದಿದ್ದು, ನಾನು ಪಾರ್ಕಿನಲ್ಲಿ ವಾಕಿಂಗ್ ಮಾಡುವಾಗ ಒಬ್ಬ ಹಿರಿಯ ವೃದ್ಧ ಬೀಳುವುದು ನೋಡಿದಾಗ. ನನ್ನ ಮೊದಲ ಪ್ರತಿಕ್ರಿಯೆ, ಅವರನ್ನು ಎಬ್ಬಿಸಿ ನಿಲ್ಲಿಸುವುದು. ಆದರೆ, ಅವರ ಶಾರೀರಿಕ ನೋವಿಗಿಂತಲೂ, ಅವರ ಭಾವನಾತ್ಮಕ ಅನುಭವಗಳಾದ ನಾಚಿಕೆ, ಮುಜುಗರ ಹೆಚ್ಚು ನೋವನ್ನುಂಟುಮಾಡಿತ್ತು. ಅವರಿಗೆ ಇದೊಂದು ಸಾಮಾನ್ಯ ಎಡವುವ ಘಟನೆ ಮಾತ್ರ ಎಂದೆನಿಸದೆ, ಅದು ಇಷ್ಟು ಕಾಲ ಧೃಢವಾಗಿದ್ದ ದೇಹ, ವಯಸ್ಸಾದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿರವ ಭಾವನೆಯಿಂದ ನೋವನ್ನುಂಟು ಮಾಡುತ್ತಿತ್ತು.

ಅದನ್ನು ಗಮನಿಸಿದ ನನಗೆ ಆಗ ಅನ್ನಿಸಿದ ವಿಚಾರವೆಂದರೆ, ತಕ್ಷಣ ಸಹಾಯಕ್ಕೆ ಧಾವಿಸುವುದಕ್ಕಿಂತ ಅವರ ಭಾವನಾತ್ಮಕ ಅಂಶಗಳ ಕಡೆಗೆ ಗಮನ ಕೊಟ್ಟು, ನಮ್ಮ ನೆರವಿನ ಹಸ್ತ ಅವರಿಗೆ ಸಹಾಯ ಎನ್ನಿಸುವುದೋ ಅಥವಾ ತೊಡಕು ಎನಿಸುವುದೋ ಎಂಬ ಸೂಕ್ಷ್ಮ ತುಲನೆ ಮಾಡಬೇಕು

ಅವರು ಎದ್ದು ನಿಂತ ನಂತರ ನನಗೆ ಅನ್ನಿಸಿದ್ದು—ಅವರಿಗೆ ತಕ್ಷಣ ಬೇರೆಯವರ ನೆರವಿನ ಬದಲು, ತಮ್ಮ ಘನತೆ ಕಾಯ್ದುಕೊಳ್ಳುದು ಮುಖ್ಯವಾಗಿತ್ತು.

ಸರಿಯಾದ ಸಮತೋಲನ ಕಾಯ್ದುಕೊಳ್ಳುವುದು ಹೇಗೆ?

ಈ ಅನುಭವಗಳ ಮೂಲಕ, ನನಗೆ ಅನ್ನಿಸಿದ್ದು, ಹಿರಿಯರ ಬಗ್ಗೆ ಕಾಳಜಿ ತೋರಿಸುವುದು ಕೇವಲ ದೈಹಿಕ ಸಹಾಯದಲ್ಲಿಲ್ಲ. ಅದು ಅವರ ಸ್ವತಂತ್ರತೆಗೆ ಗೌರವ ನೀಡುವುದರಲ್ಲಿ ಹಾಗು, ಅವರು ತಮ್ಮ ಜೀವನವನ್ನು ತಾವೇ ಘನತೆಯಿಂದ ನಿರ್ವಹಿಸುವ ಅವಕಾಶ ಓದಗಿಸಿಕೊಡುವದರಲ್ಲಿ ಇದೆ.

ತಾಯಿಯ ವಿಚಾರದಲ್ಲಿ, ಈಗೀಗ ನಾನು ಹಿಂದೆ ಸರಿದು, ಅವಳು ಕೇಳಿದಾಗ ಮಾತ್ರ ಸಹಾಯ ಮಾಡುತ್ತೇನೆ. ಅವರು ಸ್ವತಂತ್ರವಾಗಿ ಹಾಗು ಘನತೆಯಿಂದ ಬಾಳಬೇಕೆಂಬ, ಅವರ ಬದುಕಿನ ಭಾವನಾತ್ಮಕ ನಂಬಿಕೆಗೆ ಧಕ್ಕೆ ತರುವುದು ನನ್ನಿಂದ ಕಡಿಮೆಯಾಗಿದೆ.

ಆ ವೃದ್ಧರ ಬಿದ್ದಂತಹ ಘಟನೆಯಿಂದ ಕಲಿತಿದ್ದೇನೆಂದರೆ, ಸಹಾಯ ಎನ್ನುವುದು ಯಾವಾಗಲೂ ಶಾರೀರಿಕವಾಗಿ ಅಲ್ಲ. ಕೆಲವು ಸಲ ಮೌನದಿಂದ ಅಲ್ಲಿದ್ದು ಸಹಾಯ ಹಸ್ತ ಚಾಚುವುದು ಹೇಗೆ? ನನ್ನ ಸಹಾಯ ಹಸ್ತ ಚಾಚುವಿಕೆಯಿಂದ, ಶಾರೀರಿಕವಾಗಿಯೋ ಅಥವಾ ಅವರ ಆತ್ಮ ಗೌರವ, ಹಾಗೂ ಘನತೆಗಳಿಗೆ ಧಕ್ಕೆ ತರದಂತೆ ಎಚ್ಚರ ವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಹೌದಲ್ಲವೇ?

ಎಲ್ಲವನ್ನೂ ನಾನು ಸರಿಪಡಿಸಬಹುದೆಂಬ ನಂಬಿಕೆ ಬಿಟ್ಟುಬಿಡುವುದು

ನಾನು ಈಗ ಕಲಿತಿರುವುದು (ಅಥವಾ ಕಲಿತಿರುವುದನ್ನು ಅಳಿಸುವುದು)- ಹಿಂದುಮುಂದು ನೋಡದೆ "ಎಲ್ಲವನ್ನೂ ಸರಿಪಡಿಸಬಹುದು" ಎನ್ನುವ ಇಚ್ಛೆಯನ್ನು ನಿಯಂತ್ರಣದಲ್ಲಿ ಇಡಬೇಕು. ಆದರೆ, ನಿಜವಾದ ಕಾಳಜಿ ಎಂದರೆ, ಅವರಿಗೆ ಬೇಕಾದ ರೀತಿಯಲ್ಲಿ, ತಾವು ನಿರ್ಧಾರ ಮಾಡುವ ರೀತಿಯಲ್ಲಿ ನಾವು ಅವರಿಗೆ ಸಂದರ್ಭ ಓದಗಿಸಿಕೊಡಬೇಕು. ಇದು ಆರೈಕೆ ಮಾಡುವವರಿಗೂ ಭಾವನಾತ್ಮಕವಾಗಿ ಕಷ್ಟಕರ ಪ್ರಯಾಣ, ವಿಶೇಷವಾಗಿ ನಮಗೆ ಅವರ ಜೀವನವನ್ನು ಸುಗಮಗೊಳಿಸುವ ಉಪಾಯಗಳ ಬಗ್ಗೆ ಎಷ್ಟೋ ಸಲ ಅರಿವಿರುತ್ತದೆ. ಆದ್ದರಿಂದ ಅವರ ಜೊತೆಗೆ ಮೌನವಾಗಿ ಹೆಜ್ಜೆ ಹಾಕುವುದೇ ಅವರಿಗೆ ನಾವು ಮಾಡುವ ಶ್ರೇಷ್ಠ ಸಹಾಯ ಹಾಗೂ ಸೇವೆ.

ಹಿರಿಯರನ್ನು ಆರೈಸುವ ಭಾವನಾತ್ಮಕ ಪ್ರಯಾಣವು ನಿರಂತರ ಕಲಿಕೆ ಮತ್ತು ತಿದ್ದುಪಡಿ ಮಾಡುವುದರಲ್ಲಿದೆ. ನಾವು ಸಹಾಯ ಮಾಡುವ ನಮ್ಮ ಸಹಜ ಸ್ವಭಾವವನ್ನು ನಿಯಂತ್ರಿಸಿ ಅದನ್ನು ಸಮತೋಲನಗೊಳಿಸುವುದು ಮುಖ್ಯ. ಕೆಲವೊಮ್ಮೆ ಅವರ ಸ್ವಾತಂತ್ರ್ವನ್ನು ಗೌರವಿಸಿ, ಅವರು ತಮ್ಮ ಜೀವನವನ್ನು ಘನತೆಯಿಂದ ಮುಂದುವರಿಸಲು ಅವರನ್ನು ಬೆಂಬಲಿಸಿ.

ಒಂದು ಕೊನೆಯ ಚಿಂತನೆ

ಹಿರಿಯರ ಶಾರೀರಿಕ ಅಗತ್ಯಗಳನ್ನು ಪೂರೈಸುವುದಷ್ಟೇ ಅಲ್ಲ, ಅವರ ಭಾವನ್ನಾತ್ಮಕ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಗೌರವಿಸುವುದೂ ಅದಕ್ಕಿಂತ ಮುಖ್ಯ. ನಾವು ಸಹಾಯ ಮಾಡುವಾಗ, ತಮ್ಮ ಜೀವನದ ಮೇಲೆ ನಿಯಂತ್ರಣ ಕಳೆದುಕೊಳ್ಳದಂತೆ ಸಜ್ಜುಗೊಳಿಸುವ ಅವಕಾಶವನ್ನು ಅವರಿಗೆ ಓದಗಿಸಬೇಕು.

ನೀವೂ ನಿಮ್ಮ ವಯಸ್ಸಾದ ಆಪ್ತರನ್ನು ಸರಿಯಾಗಿ ನೋಡಿಕೊಳ್ಳಲು ಕಲಿಯುವ ಪಯಣದಲ್ಲಿ ಇದ್ದರೆ, ಇದು ಕೇವಲ ಅವರಿಗೆ ಕೆಲಸ ಮಾಡಿಕೊಡುವದಲ್ಲ ಅಥವಾ ಅವರಿಗೆ ನಿರಂತರ ನೆರವು ಕೊಡುವುದಲ್ಲ ಎಂಬುದನ್ನು ನೆನಪಿನಲ್ಲಿ ಇಡಿ. ಅವರೆಲ್ಲ ತಮ್ಮ ಆದ್ಯತೆಯನ್ನು ಉಳಿಸಿಕೊಂಡು, ಸ್ವತಃ ಎಲ್ಲವನ್ನೂ ನಿರ್ವಹಿಸಬಲ್ಲರು ಎಂಬ ಭಾವನೆ ಅವರಲ್ಲಿ ಮೂಡಲು ಅವಕಾಶ ನೀಡುವುದು ಅತಿ ಮುಖ್ಯ.

ನಿಮ್ಮ ಅನುಭವಗಳನ್ನು ಹಂಚಿ—ನೀವು ಸಹಾಯ ಮಾಡುವುದನ್ನು ಮತ್ತು ಸ್ವಾತಂತ್ರ್ವನ್ನು ಗೌರವಿಸುವುದರೊಂದಿಗೆ ಹೇಗೆ ಸಮತೋಲನಗೊಳಿಸುತ್ತೀರಿ? ನಮ್ಮ ನಮ್ಮ ವಿಚಾರಗಳನ್ನು ಹಂಚಿಕೊಳ್ಳೋಣ ಮತ್ತು ಒಬ್ಬರಿಂದೊಬ್ಬರು ಕಲಿಯೋಣ.

#ವೃದ್ಧ #ಗೌರವ #ಭಾವನಾತ್ಮಕ #ಕಾಳಜಿ #ಕಾಳಜಿಯಲ್ಲಿಸಮತೋಲನೆ

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?