ತಾಯಿಯ ಪ್ರೀತಿ ಮತ್ತು ಪರಮಾತ್ಮನ ಸೃಷ್ಟಿ: ಅವಿನಾಭಾವ ಬಂಧ

ಕನ್ನಡದ ಸುಪ್ರಸಿದ್ಧ ಕೀರ್ತನೆ , ಹೀಗೆ ಶುರುವಾಗುತ್ತದೆ,"ಜಗದೋದ್ಧಾರನ ಆಡಿಸಿದಳೆಶೋಧೆ"ಕರ್ನಾಟಕ ಸಂಗೀತದ ಪಿತಾಮಹರಾದ ದಾಸವರೇಣ್ಯ ಶ್ರೀ ಪುಂರಂದರದಾಸರು ರಚಿಸಿದ ಅಮೂಲ್ಯ ರತ್ನ. ಈ ಕೀರ್ತನೆ ನನ್ನ ಬಾಲ್ಯದಿಂದಲೇ ನನ್ನ ಗಮನ ಸೆಳೆದಿತ್ತು, ಇಂದೂ ಕೂಡ ನನ್ನ ಮನಸ್ಸಿನಲ್ಲಿ ಆ ಸೆಳೆತ ಉಳಿದಿದೆ. ಇದು ತಾಯಿ ಯಶೋಧೆ ತನ್ನ ಪ್ರೀತಿಯ ಕಂದನೊಂದಿಗೆ ಆಡುತ್ತಿರುವ ಒಂದು ಸರಳ ಆದರೆ ಆಳವಾದ ಚಿತ್ರಣವನ್ನು ನಮಗೆ ನೀಡುತ್ತದೆ. ಆದರೆ ಈ ಕಂದ ಶ್ರೀಕೃಷ್ಣ, ಎಲ್ಲಾ ಸಾಮಾನ್ಯ ಮಕ್ಕಳಂತೆ ಅಲ್ಲ; ಅವನೇ ಈ ಜಗದ ಸೃಷ್ಟಿಕರ್ತನು.

ಈ ಕೀರ್ತನೆಯ ಆಳಕ್ಕೆ ಹೋದಂತೆ,ಇದು ಬಹಳ ಇಷ್ಟವಾಗುತ್ತದೆ. ಶ್ರೀ ಪುರಂದರದಾಸರು ಇದರಲ್ಲಿ ಪ್ರೀತಿ/ವಾತ್ಸಲ್ಯ ಮತ್ತು ಸೃಷ್ಟಿಯ ಮಹತ್ತಾದ ಸಾರವನ್ನು ತುಂಬಾ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಅಮ್ಮ ಯಶೋದೆ ಮತ್ತು ಅವಳ ಮಗ ಶ್ರೀಕೃಷ್ಣನ ಅವಿನಾಭಾವ ಸಂಭಂಧವನ್ನು ಆಳವಾಗಿ ಮತ್ತು ಪದರು ಪದರುಗಳಾಗಿ ನಮ್ಮೆದುರು ಬಿಚ್ಚಿಟ್ಟಿದ್ದಾರೆ. ಮೇಲ್ನೋಟದಲ್ಲಿ ಇದು ತಾಯಿ ತನ್ನ ಮಗನಿಗಾಗಿ ತೋರಿಸುವ ಶ್ರೇಷ್ಠ ವಾತ್ಸಲ್ಯ. ಆದರೆ ಆಳದಲ್ಲಿ, ಇದು ಇಬ್ಬರು ಸೃಷ್ಟಿಕರ್ತರ ನಡುವಿನ ಅವಿನಾಭಾವ ಬಂಧ —ಒಬ್ಬ ತಾಯಿ, ಜೀವವನ್ನು ಪೋಷಿಸುತ್ತಾಳೆ; ಮತ್ತೊಬ್ಬ ಪರಮಾತ್ಮ, ಜಗತ್ತನ್ನು ಉಳಿಸುತ್ತಾನೆ.

Mother Yashodhe and her Son Sri Krishna
ತಾಯಿಯ ಪ್ರೀತಿ ಮತ್ತು ಪರಮಾತ್ಮನ ಸೃಷ್ಟಿ: ಅವಿನಾಭಾವ ಬಂಧ

ಒಂದು ಸಾಲು, ಕೀರ್ತನೆ ನನ್ನನ್ನು ಅದ್ಭುತವಾಗಿ ಸೆಳೆಯುವುದು ಹೀಗಿದೆ -
"ಅಣೋ ರಣೀಯನ ಮಹತೋ ಮಹೀಯನ" - ಅಣುವಿಗಿಂತ ಅಣುವು, ಮಹತ್ತಿಗಿಂತ ಮಹತ್ತು.

ನೇರವಾಗಿ ಉಪನಿಷತ್ತಿನ ಸಾಲುಗಳನ್ನು ಇಲ್ಲಿ ಬಳಸಲಾಗಿದೆ, ಇಲ್ಲಿನ ದೈವೀಕತೆಯ ಪ್ರಕೃತಿಯ ಅನಂತ, ನನ್ನನ್ನು ಅತ್ಯಂತ ಪ್ರಭಾವಿತಗೊಳಿಸುತ್ತದೆ. ಪರಮಾತ್ಮನ ಸರ್ವವ್ಯಾಪಿ ಸ್ವಭಾವವನ್ನು ಈ ಪಂಕ್ತಿ ಅರ್ಥಮಾಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಣುವಿಗಿಂತ ಸೂಕ್ಷ್ಮವಾದರೂ, ಜಗತ್ತಿನಷ್ಟು ಮಹತ್ತಾದ ಶಕ್ತಿಯನ್ನು ಹೊಂದಿರುವ ಪರಮಾತ್ಮ ತನ್ನ ತಾಯಿಯ ಮಡಿಲಿನಲ್ಲಿ ಆಟ ಆಡುವ ಶಿಶುವಾಗಿ ಆಡುವ ಕಲ್ಪನೆ ಅತ್ಯದ್ಭುತ!

ಸ್ವಲ್ಪ ಯೋಚಿಸಿ, ಈ ಸಂಬಂಧದಲ್ಲಿ ತಾಯಿ ಯಶೋದೆಯ ಪ್ರೀತಿ ಮಾತ್ರವಲ್ಲ, ಅವಳ ಪಾತ್ರ ಅಂದರೆ ಅಮ್ಮನ ಜೀವನಾರೈಕೆಯ ಶಕ್ತಿಯೂ ಅದರಲ್ಲಿ ಸ್ಪಷ್ಟವಾಗಿ ಬಿಂಬಿತವಾಗಿದೆ. ತಾಯಿ ತನ್ನ ಮಗನನ್ನು ಹೇಗೆ ತನ್ನ ಪ್ರೀತಿಯಿಂದ ಪೋಷಿಸುತ್ತಾಳೋ, ಹೀಗೆಯೇ ಜಗತ್ತನ್ನು ಪರಮಾತ್ಮ ತನ್ನ ದಯೆಯಿಂದ ಪೋಷಿಸುತ್ತಾನೆ. ಈ ಪರಸ್ಪರ ಸಂಬಂಧದ ಸೌಂದರ್ಯವೇ ಈ ಕೀರ್ತನೆಯ ಅಂತರಾಳದ ಭಾವ.

ತಾಯಿಯ ಪ್ರೀತಿ ಪ್ರಪಂಚದ ಸೃಷ್ಟಿಯಲ್ಲಿನ ಶ್ರೇಷ್ಠ ಶಕ್ತಿಯಾಗಿದೆ. ಪ್ರತಿಯೊಬ್ಬ ತಾಯಿಯ ಮಡಿಲೂ ಸೃಷ್ಟಿಯ ತೂಗುಮನೆ, ಮತ್ತು ಆ ಪ್ರೀತಿ ಮತ್ತು ಆರೈಕೆಯಿಂದಲೇ ನಮ್ಮ ಜೀವನದ ಸಮತೋಲನ ಸಾಧ್ಯವಾಗುತ್ತದೆ. ತಾಯಿಯ ಪ್ರೀತಿಯಲ್ಲಿರುವ ಶಕ್ತಿಯು, ಆಕೆ ಪರಮಾತ್ಮನ ಸೃಷ್ಟಿಯ ಪ್ರತಿರೂಪವಷ್ಟೇ ಅಲ್ಲ, ಅವಳ ಪಾತ್ರದ ದೈವಿಕತೆಯನ್ನೂ ಸಾರಿ ಹೇಳುತ್ತದೆ.

ಪುರಂದರದಾಸರ ಈ ಕೀರ್ತನೆ ತಾಯಿಯ ಪ್ರೀತಿ, ಆ ಪೋಷಣೆಯು ಜೀವಿಗಳಿಗೆ ನೀಡುವ ಮಹತ್ವ, ಮತ್ತು ಪರಮಾತ್ಮನ ಅಸ್ಥಿತ್ವವನ್ನು ಅರ್ಥಮಾಡಿಕೊಳ್ಳಲು ನಮಗೆ ಪ್ರೇರಣೆ ನೀಡುತ್ತದೆ. ಇದು ಸೃಷ್ಟಿಯ ಸುಂದರವಾದ ಕ್ಷಣಗಳನ್ನು ಎತ್ತಿ ತೋರಿಸುತ್ತದೆ.

ಶ್ರೀ ಪುರಂದರದಾಸರ ಈ ಕೃತಿಯ ಆಳಕ್ಕೆ ಹೋದಂತೆ, ಒಂದು ಅಮ್ಮ ಮಗುವಿನ ಘಟನೆಯಷ್ಟೆ ಅಲ್ಲ, ಇದು ವಿಶ್ವದ ಘಟನೆಯ ವೈಭವದ ಕ್ರಿಯೆಯಷ್ಟೇ ಅಲ್ಲ, ಇಲ್ಲಿ ನಮ್ಮ ನಡುವೆ ನಡೆಯುವ ಸಣ್ಣ ಸಣ್ಣ ದೈವೀಕತೆಯ ಕ್ಷಣಗಳನ್ನು ಅನುಭವಿಸುವಂತೆ ನಮಗೆ ಪ್ರೇರಣೆ ನೀಡುತ್ತದೆ. ಅಮ್ಮ ಮತ್ತು ಮಗುವಿನ ನವಿರಾದ ಆ ಪ್ರೇಮದ ಕ್ಷಣಗಳನ್ನು ಆನಂದಿಸುವಂತೆ ಪ್ರೇರಣೆ ನೀಡುತ್ತದೆ.

ಸೃಷ್ಟಿ ಮತ್ತು ಪೋಷಣೆ ,ಪ್ರೀತಿ ಮತ್ತು ದೈವಿಕ ಭಾವದ ಈ ಅನುಭವವೇ ನಮ್ಮ ಈ ಜೀವನವನ್ನು ಸುಂದರಗೊಳಿಸುವುದಲ್ಲವೇ?

ಇಲ್ಲಿ ಇನ್ನೊಂದು ಆಸಕ್ತಿದಾಯಕ ದೃಷ್ಟಿಕೋನ ಇದೆ: ಪ್ರತಿಯೊಂದು ಜೀವಿಯಲ್ಲಿಯೂ ಇರುವ ಆತ್ಮವನ್ನು ತಾಯಿಯಂತೆ ಆರೈಕೆ ಮಾಡುವುದು ನಮ್ಮ ಕರ್ತವ್ಯ. ತಾಯಿಯ ಪ್ರೀತಿಯಂತೆ ನಾವೂ ಆತ್ಮವನ್ನು ಕಾಪಾಡಿದಾಗ ಮಾತ್ರ ಅದರ ಮೂಲಕ ನಾವು ಆ ಪರಮ ಶಕ್ತಿಯನ್ನು — ಸರ್ವವ್ಯಾಪಿ ಮತ್ತು ಸರ್ವಶಕ್ತನಾದ ದೈವೀಕತೆಯನ್ನು — ಅನುಭವಿಸಲು ಸಾಧ್ಯವಾಗುತ್ತದೆ. ತಾಯಿ ಮಗುವಿನ ಈ ಅವಿನಾಭಾವ ಬಂಧ ಸೃಷ್ಟಿಯ ಅವಿಭಾಜ್ಯ ಅಂಗ ಮತ್ತು ಇದು ಈ ಸೃಸ್ಟಿಯ ಆನಂತತೆಯ ಅನುಭವವನ್ನು ನಮ್ಮೊಳಗೆ ಅನುಭವಿಸಲು ಪ್ರೇರೇಪಿಸುತ್ತದೆ. ಈ ದೈವಿಕ ಬಂಧವನ್ನು ಅರ್ಥಮಾಡಿಕೊಂಡು, ತಾಯಿಯ ಪ್ರೀತಿಯ ಶ್ರೇಷ್ಠತೆಯನ್ನು ಗೌರವಿಸೋಣ. ನಮ್ಮೊಳಗಿನ ಪ್ರೀತಿ ಮತ್ತು ಆರೈಕೆಯ ಮೂಲಕ ಜಗತ್ತಿನ ಸೌಂದರ್ಯವನ್ನು ಹೆಚ್ಚಿಸೋಣ.

#ತಾಯಿಪ್ರೀತಿ #ದೈವಿಕಸಂಪರ್ಕ #ಪುಂಡರದಾಸ #ಕೀರ್ತನೆ #ಆಧ್ಯಾತ್ಮಿಕಜ್ಞಾನ #ತಾಯಿಮಗ #ಉಪನಿಷತ್ತುಗಳು #ಅಣೋರಣೀಯನ #ಯಶೋದಮತ್ತುಕೃಷ್ಣ #ಸೃಷ್ಟಿಕರ್ತಮತ್ತುಸೃಷ್ಟಿ #ಆತ್ಮಸ್ಪರ್ಶಿಯಾಲೋಚನೆಗಳು #ಅನಂತಪ್ರೀತಿ #ಕರ್ನಾಟಕ #ಕರ್ನಾಟಕಸಂಗೀತ

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?