ಅತೀತವಾದ ದೈವಾನುಗ್ರಹ ಅರಸುತ್ತಾ!
ಸಾಮಾನ್ಯವಾಗಿ ನನ್ನ ತಾಯಿ ಪ್ರತಿ ಸಂಜೆ ಟಿವಿ ಮುಂದೆ ಕುಳಿತು ಭಕ್ತಿ ಆಧಾರಿತ ಧಾರಾವಾಹಿಗಳನ್ನು ನೋಡುವುದರಲ್ಲಿ ತಲ್ಲೀನವಾಗಿರುವುದನ್ನು ನೋಡಿತ್ತಿರುತ್ತೇನೆ. ಮಹಾಭಾರತ, ರಾಮಾಯಣದ ದೇವರು-ದೇವತೆಗಳ ಕಥೆಗಳಲ್ಲಿ ಆಕೆಯ ಕಣ್ಣುಗಳು ಪರದೆಗೆ ಅಂಟಿಕೊಂಡಿರುವಂತೆ ಕಾಣುತ್ತವೆ, ಮತ್ತು ಆಕೆಯ ಮನಸ್ಸು ಸಂಪೂರ್ಣವಾಗಿ ಆ ಕಥೆಗಳಲ್ಲಿ ಮುಳುಗಿರುತ್ತದೆ. ಕೆಲವೊಮ್ಮೆ, ಕೆಲವು ದೃಶ್ಯಗಳನ್ನು ನೋಡಿದಾಗ ಆಕೆಯ ಕಣ್ಣೀರು ಹರಿದುಬರುವುದನ್ನೂ ಗಮನಿಸಿದ್ದೇನೆ. ಆಕೆಯನ್ನು ಕೇವಲ ಕಥೆಗಳು ಸ್ಪರ್ಶಿಸುವುದಿಲ್ಲ, ಅದು ಮಹತ್ತಿನ ಮುಂದೆ ಆಕೆಯ ಭಕ್ತಿ ಮತ್ತು ಶರಣಾಗತಿಯ ಭಾವವೇ ಆಗಿರುತ್ತದೆ.
ನಾನು ಹಲವಾರು ಬಾರಿ ನನಗೆ ಅವಳ ಆ ಭಾವದ ಬಗ್ಗೆ ಆಲೋಚಿಸಿದ್ದೇನೆ— ಅದರಲ್ಲಿ ಆಕೆಯನ್ನು ಈ ರೀತಿಯಾಗಿ ಭಾವೋದ್ರಿಕ್ತಗೊಳಿಸುವ ಅಂಶ ಏನಿದೆ? ಆಕೆಗೆ ಆ ಭಾವನಾತ್ಮಕ ಅನುಭವದಿಂದ ಏನು ಲಭಿಸುತ್ತದೆ? ಅದು ಶಾಂತಿಯೇ? ಪೂರ್ಣತೆಯ ಅನುಭವವೇ? ಈ ಕ್ಷಣಗಳು ನನಗೆ ಶ್ರೀ ರಾಮನ ಬಗ್ಗೆ ಓದಿದ ಒಂದು ಕಥೆಯನ್ನು ನೆನಪಿಸಿಕೊಡುತ್ತವೆ.
ಶ್ರೀರಾಮನ ಒಂದು ಅಪೂರ್ವವಾದ ಕಥೆ
ಒಮ್ಮೆ, ಶ್ರೀ ರಾಮನು ಒಂದು ಮಹಾಯಾಗವನ್ನು ಮುಗಿಸಿದ ನಂತರ,ತನ್ನ ಅರಮನೆಯಲ್ಲಿ ಇರುವ ಎಲ್ಲ ಸಂಪತ್ತನ್ನು ತನ್ನ ಪ್ರಜೆಗಳಿಗೆ ಹಂಚಲು ತೀರ್ಮಾನಿಸಿದರು. ಅದರಂತೆ ಅವನು ತನ್ನ ಅರಮನೆಯನ್ನು ಬಾಗಿಲನ್ನು ತೆರೆದು, ತನ್ನ ಎಲ್ಲಾ ಪ್ರಜೆಗಳಿಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಆಹ್ವಾನಿಸಿದನು. ಶ್ರೀ ರಾಮನು ತಮ್ಮ ಲಕ್ಷ್ಮಣನ ಜೊತೆ ಅರಮನೆಯ ಒಂದು ಮೂಲೆಯಲ್ಲಿ ನಿಂತು, ಜನರು ಬಂಗಾರ, ಆಭರಣಗಳು, ಮತ್ತು ಇತರ ಧನ-ಸಂಪತ್ತುಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ಮೌನವಾಗಿ ಗಮನಿಸುತ್ತಿದ್ದನು.
ಈ ಜನಸ್ತೋಮದ ನಡುವೆ, ವಯೋವೃದ್ಧ ಮಹಿಳೆಯೊಬ್ಬಳು ಅರಮನೆ ಪ್ರವೇಶಿಸಿದಳು. ಅವಳು ಇತರರಂತೆ, ನೇರವಾಗಿ ಸಂಪತ್ತಿನ ಕಡೆ ಗಮನ ಹರಿಸಲಿಲ್ಲ. ಬದಲಾಗಿ, ಆಕೆಯ ಕಣ್ಣುಗಳು ಯಾವುದೋ ಅದಕ್ಕಿಂತಲೂ ಅಮೂಲ್ಯವಾದದ್ದನ್ನು ಹುಡುಕಲು ಬೇಗನೇ ಅತ್ತಿಂದಿತ್ತ ಹೊರಳಾದತೊಡಗಿದವು . ಕೊನೆಗೆ, ಆಕೆಯ ಕಣ್ಣುಗಳು ಮೂಲೆಯಲ್ಲಿ ನಿಂತಿದ್ದ ಶ್ರೀ ರಾಮನ ಮೇಲೆ ನೆಟ್ಟವು.
ಆಕೆಯ ಮುಖವು ಸಂತೋಷದಿಂದ ಅರಳಿತು, ತನ್ನ ಅಮೂಲ್ಯವಾದ ವಸ್ತುವನ್ನು ಗುರುತಿಸಿದಂತೆ ಆಕೆ ಶ್ರೀರಾಮನ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದಳು. ಶ್ರೀ ರಾಮನು ಆಕೆಯನ್ನು ಗಮನಿಸಿ, ಶಾಂತಚಿತ್ತನಾಗಿ ತಾಳ್ಮೆಯಿಂದ, ಆಕೆ ಅವನ ಬಳಿ ಬಂದಾಗ , ಅವನು ಮೆಲ್ಲಗೆ ಮುಗ್ದ ನಗೆಯಿಂದ ಕೂಡಿದ ಮುಖದಿಂದ, “ಅಮ್ಮಾ, ನೀವು ಬೇಕಾದ ವಸ್ತುವನ್ನು ಈ ಅರಮನೆಯಿಂದ ತೆಗೆದುಕೊಳ್ಳಬಹುದು,” ಎಂದು ಹೇಳಿದನು.
ಆಕೆ, ಯಾವುದೇ ಧನ-ಸಂಪತ್ತಿನ ಕಡೆ ಗಮನ ಕೊಡದೆ. ಕಂಬನಿ ತುಂಬಿದ ಕಣ್ಣುಗಳಲ್ಲಿ , ಕೈಗಳನ್ನು ವಿನಮ್ರ ಭಾವದಿಂದ ಜೊತೆಯಾಗಿ ಜೋಡಿಸಿ, ಮೊಣಕಾಲುಮೇಲೆ ಕುಳಿತು, ಶ್ರೀ ರಾಮನ ಪಾದಗಳಲ್ಲಿ ಶರಣಾಗತಳಾದಳು. ಭಕ್ತಿ ತುಂಬಿದ ನಾದದಲ್ಲಿ, “ರಾಮಾ, ನನಗೆ ನಿಮ್ಮ ಕೃಪೆ ಮತ್ತು ಆಶೀರ್ವಾದವನ್ನು ಮಾತ್ರ ಬಯಸುತ್ತೇನೆ, ಅದು ಬಿಟ್ಟು ಇನ್ಯಾವ ವಸ್ತುವೂ ಬೇಡ!” ಎಂದು ಹೇಳಿದಳು.
ಆ ಕ್ಷಣದಲ್ಲಿ, ಆಕೆ ತಾನು ಹುಡುಕುತ್ತಿದ್ದ ಅಮೂಲ್ಯ ವಸ್ತುವನ್ನು ಕಂಡುಕೊಂಡಳು. ಆಕೆಯ ತೃಪ್ತಿಯು ಎಲ್ಲರಂತೆ ಸುತ್ತಲಿನ ಸಂಪತ್ತಿನಲ್ಲಿ ಇರಲಿಲ್ಲ, ಬದಲಿಗೆ ದೈವದೊಂದಿಗಿನ ಆ ಆಧ್ಯಾತ್ಮಿಕ ಸಂಪರ್ಕದಲ್ಲಿ ಕಂಡುಕೊಂಡಳು.

ಶಬರಿಯ ಭಕ್ತಿ ಮತ್ತು ಶ್ರದ್ಧೆಯ ಮತ್ತೊಂದು ಕಥೆಯ ಅನುರಣನೆ!!
ಇದರಂತೆ ಇನ್ನೊಂದು ಕಥೆಯಲ್ಲಿ, ಪಂಪ ಸರೋವರದ ಹತ್ತಿರದ ಕಾಡಿನಲ್ಲಿ ಶಬರಿಯು ಬಲು ವರ್ಷಗಳ ಕಾಲ ರಾಮನ ಭೇಟಿ ನಿರೀಕ್ಷೆಯೊಂದಿಗೆ ಜೀವನನಿರ್ವಹಿಸುತ್ತಿದ್ದಳು. ಆಕೆಯ ಭಕ್ತಿ ಎಂದೆಂದಿಗೂ ಕಡಿಮೆಯಾಗಲಿಲ್ಲ, ಆಕೆಯ ಪ್ರೀತಿಯೂ ಸಹ ಎಂದಿಗೂ ಕಡಿಮೆಯಾಗಲಿಲ್ಲ. ಕೊನೆಗೆ ಒಂದು ದಿನ ಶ್ರೀ ರಾಮನು, ಆಕೆಯ ಚಿಕ್ಕ ಗುಡಿಸಲಿನಲ್ಲಿ ಕಾಲಿಟ್ಟಾಗ ಆಕೆಯ ಸಂತೋಷವು ಮಾತುಗಳ ಎಲ್ಲೆ ಮೀರಿದ ಭಾವವಾಗಿತ್ತು. ಶಬರಿಯೂ ಕೂಡ ಕೇವಲ ಆತನ ಕೃಪೆಯನ್ನು ಬಯಸಿ, ಅದರಲ್ಲಿ ತನ್ನ ಜೀವನದ ಅರ್ಥವನ್ನು ಕಂಡುಕೊಂಡಳು.
ಈ ಕಥೆಗಳು ನಮಗೆ ಏನನ್ನು ಹೇಳಲು ಹೊರಟಿವೆ?
ನನ್ನ ತಾಯಿಯನ್ನು ನೋಡುತ್ತಾ, ಈ ಕಥೆಗಳನ್ನು ನೆನಪಿಸಿಕೊಂಡು, ನನ್ನ ಮನಸ್ಸಿನಲ್ಲಿ ಒಂದು ಸ್ಪಷ್ಟವಾದ ಸತ್ಯ ಗೋಚರಿಸಲು ಪ್ರಾರಂಭಿಸಿತು: ಶರಣಾಗತಿಯ ಉತ್ತುಂಗ ಮತ್ತು ದೇವರ ಮೇಲೆ ಅಖಂಡ ಭಕ್ತಿ ನಮಗೆ ಅತೀತವಾದ ಸಂತೋಷದ ಅನುಭವವನ್ನು ನೀಡುತ್ತದೆ.ಅದು ಬಾಹ್ಯ ಸಂಪತ್ತು ಅಥವಾ ಸಾಧನೆಗಳ ಬಗ್ಗೆ ಅಲ್ಲ. ದೇವರ ಕೃಪೆಯಲ್ಲಿರುವ ಆಧ್ಯಾತ್ಮಿಕ ಸಂಪರ್ಕವೇ ನಮ್ಮ ತೃಪ್ತಿಯ ಮೂಲವಾಗಿದೆ.
ಬಹುಶಃ ವಯೋವೃದ್ಧ ಮಹಿಳೆ ಮತ್ತು ಶಬರಿಯು ಅನುಭವಿಸಿದ ಅದೇ ಭಾವ ನನ್ನ ತಾಯಿ ಭಾವೋದ್ರಿಕ್ತ ದೃಶ್ಯಗಳನ್ನು ನೋಡುತ್ತಿರುವಾಗ ಅನುಭವಿಸುತ್ತಿದ್ದಾಳೆ ಅನಿಸುತ್ತದೆ —ಅದೇ ಶಾಂತಿ, ಅದೇ ಸಂಪರ್ಕ, ಅದೇ ತೃಪ್ತಿಯ ಅನುಭಾವ ಇರಬಹುದು.
#ಶ್ರೀರಾಮ #ಭಕ್ತಿ #ಕೃಪೆ #ಆಧ್ಯಾತ್ಮಿಕತೃಪ್ತಿ #ಶರಣಾಗತಿ #ನಿಜವಾದಉದ್ದೇಶ #ಪವಿತ್ರಕಥೆಗಳು #ಭಾವನಾತ್ಮಕಪ್ರಯಾಣ #ಆಶೀರ್ವಾದ #ಆಧ್ಯಾತ್ಮಿಕವಿಕಾಸ #ನಂಬಿಕೆ #ಅಂತರಿಕಶಾಂತಿ #ಭಾವೋದ್ರಿಕ್ತಭಕ್ತಿ #ದೈವಿಕಕೃಪೆ #ಶಾಶ್ವತಪ್ರೇಮ