ನಿಮ್ಮೊಳಗೇ ಏನೋ ಸರಿಯಿಲ್ಲ ಎಂದು ಅನ್ನಿಸುತ್ತಿದೆಯಾ? ಮನಸ್ಸು ಎಲ್ಲವನ್ನು ಪರಿಹರಿಸಲು ಅಸಾಧ್ಯ ಎನ್ನುವುದಕ್ಕೆ ಕಾರಣ ನೋಡೋಣ.
ಕಳೆದ ವಾರ, ಒಂದು ದಿನ, ಕೆಲವು ವೈಯಕ್ತಿಕ ಸವಾಲುಗಳ ಬಗ್ಗೆ ನಿರಂತರ ಭಾವೋದ್ವೇಗದ ದ್ವಂದ್ವದಲ್ಲಿ ಮುಳುಗಿಹೋಗಿದ್ದೆ—ಮುಖ್ಯವಾಗಿ ಭವಿಷ್ಯದ ಭಯ. ನನ್ನೊಳಗೆ ಏನೋ ಸರಿಯಿಲ್ಲ ಎಂಬ ಭಾವನೆ ಹುಟ್ಟುಹಾಕಿತ್ತು. ಈ ಅನಿಸಿಕೆ ದಿನವೆಲ್ಲ ನನ್ನೊಂದಿಗೆ ಇದ್ದು, ಅದರ ಸ್ಪಷ್ಟ ಕಾರಣವೇನು ಎಂಬುದು ಗೊತ್ತಾಗದೆ ಮನಸ್ಸಿನಲ್ಲಿ ಅಸಮಾಧಾನ ಮತ್ತು ಗೊಂದಲಗಳನ್ನು ಉಂಟುಮಾಡಿತು. ಸಂಜೆಗಾಗಲೇ ನಾನು ಆಲಸ್ಯದಿಂದ ಕುಂದುಹೋಗಿದ್ದೆ, ಪ್ರತಿ ದಿನದಂತೆ ಸಂಜೆ ನಡಿಗೆಗೆ ಹೊರಡಲು ಸಹ ದೈಹಿಕವಾಗಿ ಹಿಂಜರಿಯತೊಡಗಿದೆ.

ಆದರೆ, ನನ್ನ ಮನಸ್ಸಿನ ವಿರೋಧವನ್ನು ಪಜ್ಞಾಪೂರ್ವಕವಾಗಿ ತಳ್ಳಿಹಾಕಿ, ಎದ್ದು ಹೊರಗೆ ದಿನನಿತ್ಯದಂತೆ ನಡಿಗೆ ಪ್ರಾರಂಭಿಸಲು ನಿರ್ಧರಿಸಿದೆ. ನಡೆಯಲು ಶುರು ಮಾಡಿದಾಗ, ನನ್ನೊಳಗಿನ ನನ್ನ ಮನಸ್ಸಿನ ಬದಲಾವಣೆಗಳ ಮೇಲೆ ಗಮನ ಹರಿಸಿದೆ. ನನ್ನ "ಅಂತರಾತ್ಮ"ದ ಮೇಲೆ ಮನಸ್ಸು ಬಿಗಿ ಹಿಡಿತವನ್ನು ಸಾಧಿಸಿದಂತೆ ಗೋಚರಿಸಿತು. ಚಿಂತೆಯ ಕಾರ್ಮೋಡಗಳು ನನ್ನನ್ನು ಆವರಿಸಿತ್ತು, ನಾಳೆಯ ಸವಾಲುಗಳ ಬಗ್ಗೆ ಅತಿಯಾದ ಆಲೋಚನೆ ಮಾಡಿದಂತೆ, ಹೃದಯದಲ್ಲಿ ಭಾವನೆಗಳ ತೂಕವನ್ನು ಹೆಚ್ಚಿಸುತ್ತಿದ್ದವು. ಚಿಂತನೆಗಳ ಚಕ್ರ ವೃತ್ತಾಕಾರವಾಗಿ ಸುತ್ತಿ ನನ್ನ ಮನೋಸ್ಥಿತಿಯನ್ನು ಕುಗ್ಗಿಸಿತ್ತು.
ಅರ್ಧ ಗಂಟೆ ನಡೆದ ನಂತರ, ಮನೆಯ ಹತ್ತಿರದ ಕೆರೆಯ ಹತ್ತಿರ ನಿಂತೆ. ನಾನು ಶಾರೀರಿಕವಾಗಿ ಚಲಿಸುತ್ತಿದ್ದರೂ, ನನ್ನೊಳಗಿನ ಶಕ್ತಿಯೊಂದರ ವಿರುದ್ಧ ಪ್ರಬಲ ಹೋರಾಟ ಮಾಡುತ್ತಿರುವಂತೆ ಅನುಭವವಾಗತೊಡಗಿತ್ತು.
ಆ ಕ್ಷಣದಲ್ಲಿ, ನನಗೆ ಕಳೆದು ಹೋದ ಭೂತಕಾಲದ ಮೇಲೆಯಾಗಲಿ ಅಥವಾ ಬರುವ ಭವಿಷ್ಯದ ಮೇಲೆ ಯಾವುದೇ ಹಿಡಿತವಿಲ್ಲ ಎಂಬ ಸ್ಪಷ್ಟತೆ ಹೊಳೆಯಿತು. ಒಮ್ಮೆ ದೀರ್ಘವಾದ ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಂಡು, "ಎಂತಹ ವಿಧಿಯಾಟ ನಡೆಯಬೇಕೆಂದಿದ್ದರೂ ನಡೆದೇ ತೀರುತ್ತದೆ, ಅದು ನಡೆಯಲಿ, ಪರವಾಗಿಲ್ಲ," ಎಂದು ನನಗೆ ನಾನೇ ಅಂದುಕೊಂಡೆ. ಆ ಸಮಯದಲ್ಲಿ ಒಂದು ವಿಶೇಷವಾದ ಅನುಭವ ಆಯಿತು —ನನ್ನೊಳಗಿನ ಚಿಂತೆಯ ಮೋಡಗಳು ಮಾಯವಾಯಿತು. ಮನಸ್ಸು ನನ್ನ "ಅಂತರಾತ್ಮ" ದ ಮೇಲೆ ಹಿಡಿತ ಸಡಿಲಿಸಿ ಒಂದು ನಿರಾಳತೆಯ ಭಾವ ಸುಳಿದಾಡಿತು ಮತ್ತು ಸ್ಪಷ್ಟತೆ ಸಿಕ್ಕಂತಾಯಿತು. ಭಾರವು ಕಾಡಿಮೆಯಾದಂತೆ ಭಾಸವಾಯಿತು.
ಈ ಅನುಭವ ನನಗೆ ಮನಸ್ಸಿನ ಸ್ವಭಾವ ಮತ್ತು ಅದರ ಪಾತ್ರದ ಬಗ್ಗೆ ಆಳವಾದ ಪರಾಮರ್ಶೆಗೆ ದಾರಿ ಮಾಡಿಕೊಟ್ಟಿತು, ಇದರಿಂದ ಒಂದು ದೃಢವಾದ ಮನವರಿಕೆಯಾಯಿತು:
ನಮ್ಮ ಮನಸ್ಸು: ಸೇವಕ, ಒಡೆಯನಲ್ಲ
ನಾವು ನಮ್ಮ ಮನಸ್ಸು ಜೀವನದ ಎಲ್ಲಾ ಸಮಸ್ಯೆಗಳನ್ನು "ಸರಿ ಮಾಡುತ್ತದೆ" ಎಂಬ ನಂಬಿಕೆಯಿಂದ ಅದರ ಮೇಲೆ ಅವಲಂಬಿತರಾಗುತ್ತೇವೆ—ಅದು ವಾಸ್ತವಿಕ ಸವಾಲುಗಳಿಂದ ಹಿಡಿದು ಭಾವನಾತ್ಮಕ ದ್ವಂದ್ವಗಳು ಮತ್ತು ಅಸ್ತಿತ್ವದ ಯಕ್ಷ ಪ್ರಶ್ನೆಗಳವರೆಗೆ ನಾವು ಉತ್ತರಕ್ಕಾಗಿ ಮನಸ್ಸಿನ ಕಡೆ ತಿರುಗುತ್ತೇವೆ. ಆದರೆ ಮನಸ್ಸು ನಿಜವಾಗಿಯೂ ಈ ಎಲ್ಲಾ ಸವಾಲುಗಳಿಗೂ ಪರಿಹಾರ ಕೊಡಲು ಸಿದ್ಧವಾಗಿದೆಯೇ?
ಮನಸ್ಸಿನ ದ್ವಂದ್ವ ಸ್ವಭಾವ
ಮನಸ್ಸನ್ನು ಸರಿಯಾದ ಸಂದರ್ಭಗಳಲ್ಲಿ ಬಳಸಿದರೆ ಅದ್ಭುತ ಸಾಧನೆಗಳನ್ನು ಸಾಧಿಸಬಲ್ಲ ಪ್ರಬಲ ಸಾಧನ. ಅದು ಮಾನವ ಜನಾಂಗದ ಉಳಿವಿಗಾಗಿ ಶ್ರೇಷ್ಠವಾದ ಸಾಧನವಾಗಿದೆ ಎಂಬುದನ್ನು ಸತ್ಯವಾಗಿ ಒಪ್ಪಲೇಬೇಕಾದ ವಿಚಾರ. ಮತ್ತು ಕೆಳಗಿನ ಕೆಲವು ಕಾರ್ಯಗಳಲ್ಲಿ ನಮಗೆ ಇಂದಿಗೂ ಬೇಕಾದ ಸಾಧನ:
- ತಾರ್ಕಿಕ ಚಿಂತನೆ: ವಿಶ್ಲೇಷಣೆ, ಸಂಘಟನೆ, ಮತ್ತು ಯೋಜನೆ.
- ಸಮಸ್ಯಾ ಪರಿಹಾರ: ಸ್ಪಷ್ಟತೆ ಮತ್ತು ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು.
- ಮಾದರಿಗಳನ್ನು ಗುರುತಿಸುವುದು: ಹಳೆಯ ಅನುಭವಗಳಿಂದ ಅರ್ಥಪೂರ್ಣ ಚಿಂತನೆಯ ವಿಧಾನವನ್ನು ರಚಿಸುವುದು.
ಆದರೆ, ಇದು ನಿಸ್ಸಂಶಯವಾಗಿ ಕೆಳಗಿನ ಕೆಲವು ಕಾರ್ಯಗಳಲ್ಲಿ ಸೋಲುತ್ತದೆ:
- ಅವ್ಯಕ್ತ ಕಲ್ಪನೆಗಳು: ಕಾಲ ಮತ್ತು ಸ್ಥಳದ ಬಗೆಗಿನ ಚಿಂತನೆ.
- ಸಂಕೀರ್ಣವಾದ ಭಾವನಾತ್ಮಕ ವಿಚಾರಗಳು: ಗಾಢ ಭಾವನಾತ್ಮಕ ವಿಚಾರಗಳಿಂದ ಭಾರವಾಗುವುದು.
- ಅಸ್ತಿತ್ವದ ಪ್ರಶ್ನೆಗಳು: ತಾರ್ಕಿಕತೆಯನ್ನು ಮೀರುವ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ಮನಸ್ಸಿಗೆ ಸಾಧ್ಯವಿಲ್ಲದ ಕಾರ್ಯಗಳನ್ನು ಕೊಡಿಸುವುದು—ಅಂಥವು ಭಾವನಾತ್ಮಕ ಅಥವಾ ಅವ್ಯಕ್ತ ಭಯಗಳನ್ನು ಪರಿಹರಿಸುವುದು—ಸಮಸ್ಯೆ, ಭಯ, ಮತ್ತು ಚಿಂತೆಗಳಿಗೆ ದಾರಿ ಮಾಡುತ್ತದೆ.
ಮನಸ್ಸು: ಸಾಧನ, ಒಡೆಯನಲ್ಲ
ಮನಸ್ಸು ಕೌಶಲ್ಯಯುತ ಸಹಾಯಕನಂತೆ—ಸದ್ಬಳಕೆ ಮಾಡುವುದು ಅನಿವಾರ್ಯ, ಆದರೆ ನಮ್ಮ "ಅಂತರಾತ್ಮ"ದ ಮೇಲೆ ಹಿಡಿತ ಸಾಧಿಸಿ ಮೆರೆದಾಗ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ನಮ್ಮ ಕಿವಿಯನ್ನು ನಾವು ನೋಡಲು ಹೇಗೆ ಉಪಯೋಗಿಸುವುದಿಲ್ಲವೋ ಅಥವಾ ಕಣ್ಣನ್ನು ಹೇಗೆ ಕೇಳಲು ಉಪಯೋಗಿಸುವುದಿಲ್ಲವೋ ಹಾಗೆಯೇ ಜೀವನದ ಎಲ್ಲಾ ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಅತಿಯಾಗಿ ಮನಸ್ಸನ್ನು ಉಪಯೋಗಿಸದೆ ಅದರ ಕಾರ್ಯಗಳಿಗೆ ಮಾತ್ರ ಸೀಮಿತಗೊಳಿಸಿ ಸದ್ಬಳಕೆ ಮಾಡಿದರೆ ಮಾತ್ರ ಅದರಿಂದ ನಾವು ಶಾಂತಿ ಮತ್ತು ಸ್ಪಷ್ಟತೆಯನ್ನು ಕಂಡುಕೊಳ್ಳಬಹುದು.
ಮನಸ್ಸು ಒಡೆಯನಂತೆ ತನಗೆ ಅರಿಯದ ಎಲ್ಲ ಸಮಸ್ಯೆಗಳಲ್ಲಿಯೂ ನಮ್ಮ ಅಂತರಂಗದ ಮೇಲೆ ಹತೋಟಿ ಸಾಧಿಸ ಹೊರಟರೆ ಅನಿಷ್ಟತತೆಯ ಕಾರ್ಮೋಡ ಉಂಟುಮಾಡಿ, ಭಯವೆಂಬ ಬೆಂಕಿಯನ್ನು ಹೊತ್ತಿಸಿ, ಅದರಿಂದ ಅತಿಯಾದ ಚಿಂತೆಯ ಚಿತೆ ನಿಲ್ಲದ ಚಕ್ರದಂತೆ ಸುತ್ತಿ ಸುತ್ತಿ ನಮ್ಮನ್ನು ಬಸವಳೆಯುವಂತೆ ಮಾಡುತ್ತದೆ. ಅದು ಬಿಟ್ಟು ಅದನ್ನು ಅದರದೇ ಕೌಶಲ್ಯಯುತ ಕಾರ್ಯಗಳಲ್ಲಿ ತೊಡಗಿಸಿ, ನಮ್ಮ ಸೇವಕನಂತೆ ಸದ್ಬಳಕೆ ಮಾಡಿದರೆ ಮಾತ್ರ ನಾವು ಶಾಂತಿಯುತ ಸ್ಪಷ್ಟತೆಯ ಜೀವನ ಮಾಡಲು ಸಾಧ್ಯ.
ಕೆಲವು ಕಾರ್ಯಗಳಲ್ಲಿ ಮನಸ್ಸು ಏಕೆ ಸೋಲುತ್ತದೆ
ಮನಸ್ಸಿನ ಮೂಲ ಕಾರ್ಯಗಳೆಂದರೆ, ಮಾಹಿತಿಗಳನ್ನು ಕಲೆ ಹಾಕುವುದು, ವ್ಯವಸ್ಥಿತವಾಗಿ ಅವುಗಳನ್ನು ಉಳಿಸುವುದು. ಅದು ತಾರ್ಕಿಕ ಚಿಂತನೆಗಳಲ್ಲಿ ಅದ್ಭುತವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ, ಆದರೆ ಅವ್ಯಕ್ತವಾದ ಮತ್ತು ಸಂಕೀರ್ಣವಾದ ಭಾವಾತ್ಮಕ ಸನ್ನಿವೇಶಗಲ್ಲಿ ಬೇಕಾದ ಆಳವನ್ನು ಅರ್ಥ ಮಾಡಿಕೊಳ್ಳಲು ಪರದಾಡುತ್ತದೆ.
ಮನಸ್ಸಿನ ಈ ಮಿತಿಯನ್ನು ಆಲ್ಬರ್ಟ್ ಐನ್ಸ್ಟೀನ್ ಸುಂದರವಾಗಿ ಹೇಳಿರುವಂತೆ: "ನಮ್ಮ ಸಮಸ್ಯೆಗಳನ್ನು ಎಂದೂ ಸಹ ಅದನ್ನು ಸೃಷ್ಟಿಸಿದ ನಮ್ಮ ಚಿಂತನೆಗಳಿಂದ ಪರಿಹರಿಸುವುದು ಅಸಾಧ್ಯ.
ಇದೆ ರೀತಿಯಲ್ಲಿ, ಆಧ್ಯಾತ್ಮಗ್ರಂಥ ಎನಿಸಿಕೊಂಡಿರುವ ಭಗವತ್ ಗೀತೆ ಕಾಲತೀತವಾದ ಜ್ಞಾನದ ಭಾಗವಾಗಿ, ಮನಸ್ಸಿನ ಈ ಪ್ರಕ್ಷುಬ್ಧ ಗುಣವನ್ನು ಕುರಿತು ಶ್ರೀ ಕೃಷ್ಣ ಸಾರಿರುವಂತೆ: "ಪ್ರಕ್ಷುಬ್ಧತೆ,ಗೊಂದಲ, ಮೊಂಡುತನದಿಂದ ಪ್ರಬಲವಾಗಿರುವ ಮನಸ್ಸನ್ನು ತಿಳಿಗೊಳಿಸು, ಇದು ತುಂಬಾ ಕಠಿಣತಮ ಕೆಲಸ, ಇದು ಗಾಳಿಯನ್ನು ನಮ್ಮ ಹತೋಟಿಗೆ ತರುವಂತೆ ಕಷ್ಟಕರ"
ಮೇಲಿನ ಈ ವಾಕ್ಯಗಳು ಮನಸ್ಸು ನಮ್ಮ ಒಡೆಯನಾಗಲು ಬಿಡದೆ, ನಮ್ಮ ಹತೋಟಿಯಲ್ಲಿಡುವುದು ನಮ್ಮ ಒಳಗಣ ಶಾಂತತೆಗೆ ತುಂಬಾ ಮಹತ್ವ ಎನ್ನುವ ವಿಚಾರವನ್ನು ಸಾರಿ ಹೇಳುತ್ತದೆ.
ಮನಸ್ಸನ್ನು ಸಮರ್ಪಕವಾಗಿ ಬಳಸುವ ಪ್ರಾಯೋಗಿಕ ದಾರಿ:
- ಮನಸ್ಸಿನ ಮಿತಿ ಗುರುತಿಸಿಕೊಳ್ಳಿ: ಭಾವನಾತ್ಮಕ ಅಥವಾ ನಮ್ಮ ಅಸ್ತಿತ್ವದ ಸವಾಲುಗಳಿಗೆ ಮನಸ್ಸನ್ನು ಬಳಸಬೇಡಿ.
- ಮಾನಸಿಕ ಅರಿವು ಅಭ್ಯಾಸ ಮಾಡಿ: ನಿಮ್ಮ ಚಿಂತನೆಗಳನ್ನು ಹೊರಗೆ ನಿಂತು ಗಮನಿಸಿ, ಅದರ ಜೊತೆ ಗುರುತಿಸಿಕೊಂಡು ಮುಳುಗಬೇಡಿ.
- ಜೀವನವನ್ನು ಇದ್ದಂತೆ ಸ್ವೀಕರಿಸಿ: ಪ್ರತಿಯೊಂದು ಭಯ ಅಥವಾ ಸಮಸ್ಯೆಗೆ ಯಾವಾಗಲೂ ಪರಿಹಾರವೇ ಅನಿವಾರ್ಯವಾಗಿರುವುದಿಲ್ಲ.
- ಅಂತರ್ದೃಷ್ಟಿಯ ಮೊರೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ: ಭಾವನಾತ್ಮಕ ಮತ್ತು ಅವ್ಯಕ್ತ ಸಮಸ್ಯೆಗಳಿಗೆ ಆಂತರಿಕ ಜ್ಞಾನದ ಮೇಲೆ ಭರವಸೆ ಇಡಿ.
- ಶಾಂತವಾಗಿ ಯೋಚಿಸಿ: ಒಂದು ಹೆಜ್ಜೆ ಹಿಂದಕ್ಕೆ ಸರಿದು, ಸ್ಪಷ್ಟತೆಯು ಸಹಜವಾಗಿ ಹೊರಹೊಮ್ಮಲು ಬಿಡಿ.
ಮನಸ್ಸು ಮತ್ತು ಭಾವಾತ್ಮಕ ಸಂಕೀರ್ಣತೆ
ಭಾವನಾತ್ಮಕ ಪರಿಸ್ಥಿತಿಗಳಿಗೆ ಸ್ಪಷ್ಟವಾದ ಕಾರಣ ಅಥವಾ ಸ್ವರೂಪ ಇಲ್ಲದಿರುತ್ತದೆ. ಹಲವಾರು ಬಾರಿ ಪರಿಹಾರವು ಸಂಕೀರ್ಣವಾಗಿರುತ್ತದೆ ಎಷ್ಟೋ ಸಲ ಪರಿಹಾರ ಕೂಡ ಇಲ್ಲದೇ ಇರುತ್ತದೆ. ಇಂತಹ ಸವಾಲುಗಳನ್ನು ಮನಸ್ಸಿಗೆ ಒಪ್ಪಿಸುವುದರಿಂದ ಅದು ಹೆಚ್ಚು ಆಲೋಚನೆ ನಮ್ಮನ್ನು ತಳ್ಳಿ, ಅಂತರಂಗದಲ್ಲಿ ಬೇಡದಿರುವ ಸಂದೇಹಗಳನ್ನು ಹುಟ್ಟುಹಾಕಿ ಹೆಚ್ಚು ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಇವುಗಳಿಗೆ ಪರಿಹಾರ ಹುಡುಕಲು ಹೃದಯ, ಆಂತರಿಕ ಭಾವನೆ ಅಥವಾ ಅಂತರಂಗದ ಪಯಣದ ಮೂಲಕ ಒಳಮುಖಿಯಾಗುವುದು ಭಾವಾತ್ಮಕ ಗಾಯ ಮಾಸಲು ಉತ್ತಮ ಉಪಾಯವಾಗುತ್ತದೆ.
ಅಂತಿಮ ವಿಚಾರ
ಮನಸ್ಸಿನ ಶಕ್ತಿ- ತಾರ್ಕಿಕತೆ ಮತ್ತು ಮಾಹಿತಿಗಳನ್ನು ವ್ಯವಸ್ಥಿತವಾಗಿ ಕಲೆ ಹಾಕುವುದರಲ್ಲಿ ಇದೆ. ಆದರೆ ಭಾವನಾತ್ಮಕ ಅಥವಾ ಅಸ್ತಿತ್ವದ ಸವಾಲುಗಳಲ್ಲಿ, ಎಷ್ಟೋ ಸಲ ವಿಫಲವಾಗುತ್ತದೆ. ಅದರ ಶಕ್ತಿ ಮತ್ತು ಮಿತಿಗಳನ್ನು ಅರಿತುಕೊಂಡು ಅದನ್ನು ಸದ್ಭಳಕೆಮಾಡಿಕೊಳ್ಳುವುದರಿಂದ ನಾವು ಹೆಚ್ಚು ಶಾಂತಿ ಮತ್ತು ಸ್ಪಷ್ಟತೆಯನ್ನು ಕಂಡುಕೊಳ್ಳಬಹುದು.
ಇದನ್ನು ಮಾತ್ರ ಸ್ಪಷ್ಟವಾಗಿ ನೆನಪಿನಲ್ಲಿ ಇಡೋಣ: ಮನಸ್ಸು ಯಾವತ್ತೂ ಒಡೆಯನಲ್ಲ. ಅದರ ಮೇಲೆ ನಾವು ಹತೋಟಿ ಸಾಧಿಸಿದರೆ ಮಾತ್ರ ನಮ್ಮ ಜೀವನ ಸುಗಮವಾಗಿ ಮುಂದುವರೆಯುತ್ತದೆ.
ನಿಮ್ಮ ಅಭಿಪ್ರಾಯವೇನು? ನೀವು ಹೇಗೆ ಮನಸ್ಸಿನ ಪಾತ್ರವನ್ನು ನಿಮ್ಮ ಜೀವನದಲ್ಲಿ ಸಮತೋಲನದಲ್ಲಿ ಇಡುತ್ತಿದ್ದೀರಿ? ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ✌️
#ಮನಸ್ಸಿನಜಾಗರೂಕತೆ #ಸ್ವಅವಗತಿ #ಭಾವನಾತ್ಮಕಆರೋಗ್ಯ #ಆಂತರಿಕಶಾಂತಿ #ಮನಸಮತೋಲನ #ಆಧ್ಯಾತ್ಮಿಕವಿಕಾಸ #ಭಾವನಾತ್ಮಕಸಮತೋಲನ #ಆಂತರಿಕಪ್ರಯಾಣ #ಸ್ವಚಿಂತನೆ #ವೈಯಕ್ತಿಕವಿಕಾಸ #ಜಾಗರೂಕತೆಯಪ್ರಾಮುಖ್ಯತೆ #ಭಾವನಾತ್ಮಕಚಿಕಿತ್ಸೆ #ಮನೋಆರೋಗ್ಯಜಾಗೃತಿ #ಮನಸ್ಸಿನಮನೋಭಾವ #ಜೀವನಸಮತೋಲನ #ಆಂತರಿಕಶಾಂತಿ #ಸಮಗ್ರಜೀವನ
ನನ್ನನ್ನು ಸಂಪರ್ಕಿಸಿ!
ವೆಬ್ಸೈಟ್: www.avyaktah.com
ಇಮೇಲ್: connect@avyaktah.com
ಲಿಂಕ್ಡ್ಇನ್: www.linkedin.com/in/avyaktah